ಬೆಂಗಳೂರು: ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಬಗ್ಗೆ ಅಲ್ಪಸಂಖ್ಯಾತರ ಇಲಾಖೆ ತೋರಿದ ಅಸಹಕಾರ ನಡೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಖಂಡಿಸುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯನ್ನು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಮತ್ತು ದಿನಾಂಕವನ್ನು ದೂರವಾಣಿ ಮೂಲಕ ಸಂವಹನ ನಡೆಸಿ ನಿಗದಿ ಮಾಡಿದ್ದರೂ ಸಹ (ಜಾಲ ಸಂಪರ್ಕ ಸಭೆ) ಸಭೆಯಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳಾಗಲಿ, ಅಧೀನ ಇಲಾಖೆಗಳ ಅಧಿಕಾರಿಗಳಾಗಲಿ ಪಾಲ್ಗೊಳ್ಳದೇ ಉದಾಸೀನ ತೋರುವ ಮೂಲಕ ಸರ್ಕಾರದ ಸುತ್ತೋಲೆಯ ನಿಯಮವನ್ನು ಉಲ್ಲಂಘಿಸಿದಂತಾಗಿದೆ. ಇದು ಹೀಗೆ ಮುಂದುವರಿದಲ್ಲಿ ಅಗತ್ಯ ಕ್ರಮಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಇಲಾಖೆಯ ಪರಿಶೀಲನೆ ಎಂದ ಮೇಲೆ ಇಡೀ ಇಲಾಖೆಯ ಅಧಿಕಾರಿಗಳು ಮತ್ತು ಅಧೀನ ಇಲಾಖೆಯ ಅಧಿಕಾರಿಗಳು ಖುದ್ದು ಹಾಜರಿರುವುದು ಸ್ವಯಂ ವೇದ್ಯವಾಗಿದೆ. ಅಲ್ಲದೆ ಕನ್ನಡ ಭಾಷೆಯನ್ನು ಆಡಳಿತದ ಎಲ್ಲಾ ಹಂತದಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ರಾಜ್ಯ ಸರ್ಕಾರ ಮತ್ತು ಸ್ಥಳೀಯ ನಿಕಾಯಗಳ ಅಧಿಕಾರಿಗಳು ಮತ್ತು ನೌಕರರು ಉಲ್ಲಂಘಿಸಿದರೆ ಅಂತಹ ಉಲ್ಲಂಘನೆಯನ್ನು ಕರ್ತವ್ಯಲೋಪವೆಂದು ದಾಖಲಿಸಲು ಮತ್ತು ಅಂತಹವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ನೇಮಕಾತಿ ಪ್ರಾಧಿಕಾರಕ್ಕೆ ಸಲಹೆ ನೀಡಲು ಹಾಗೂ ರಾಜ್ಯ/ ಕೇಂದ್ರ ಸರ್ಕಾರದ ಇಲಾಖೆಗಳು/ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ (ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 1994ರ ನಿಯಮ 19) ಎಂದು ವಿವರಿಸಿದ್ದಾರೆ.
ಕನ್ನಡ ಭಾಷೆಯನ್ನು ರಾಜ್ಯದ ಆಡಳಿತದ ಎಲ್ಲಾ ಮಟ್ಟದಲ್ಲಿ ಅನುಷ್ಠಾನವಾಗುತ್ತಿರುವುದರ ಪರಿಶೀಲನೆಯೂ ಸೇರಿದಂತೆ ಕನ್ನಡ ಭಾಷೆ ಮತ್ತು ಕನ್ನಡ ಜನರ ಹಿತಾಸಕ್ತಿಯನ್ನು ಕಾನೂನಿನನ್ವಯ ಸಂರಕ್ಷಿಸುವ ಸಲುವಾಗಿ ರಾಜ್ಯ ಶಾಸನದ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿರುತ್ತದೆ. ಪದೇ ಪದೆ ದಿನಾಂಕಗಳನ್ನು ಮುಂದೂಡಿದ್ದು, ಸಭೆ ಆಯೋಜಿಸುವಂತೆ ಕೋರಿದ ಪ್ರಾಧಿಕಾರಕ್ಕೆ ಮಾಹಿತಿ ನೀಡದೆ ಉದ್ಧಟತನ ತೋರಿದ್ದು ಸರಿಯಾದ ಕ್ರಮವಲ್ಲ. ಹಾಗಾಗಿ ಅಲ್ಪಸಂಖ್ಯಾತರ ಇಲಾಖೆ ಕನ್ನಡದ ವಿಷಯದಲ್ಲಿ ಅಸಹಕಾರ ತೋರಿದೆ ಎಂದು ನಾಗಾಭರಣ ದೂರಿದ್ದಾರೆ.