ಬೆಂಗಳೂರು : ಸಾರಿಗೆ ನೌಕರರ ಮೇಲೆ ಸೇಡಿನ ಕ್ರಮ ಸರಿಯಲ್ಲ. ಸಚಿವರ ಇಚ್ಛಾಶಕ್ತಿ ಕೊರತೆಯಿಂದ ಕಾರ್ಮಿಕರು ಬೀದಿಪಾಲಾಗಿದ್ದಾರೆ ಎಂದು ಆರೋಪಿಸಿ ಸಾರಿಗೆ ಕಾರ್ಮಿಕ ಸಂಘಟನೆಗಳು ಸಿಐಟಿಯು ನೇತೃತ್ವದಲ್ಲಿ ಧರಣಿ ನಡೆಸಿದವು.
ನಗರದ ಮೌರ್ಯ ಸರ್ಕಲ್ನಲ್ಲಿ ಜಮಾಯಿಸಿದ ಅಧಿಕ ಸಂಖ್ಯೆಯ ಕಾರ್ಯಕರ್ತರು ಸಚಿವರು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಏಪ್ರಿಲ್ನಲ್ಲಿ ನಡೆದ ಮುಷ್ಕರದ ವೇಳೆ ವಜಾ ಮಾಡಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ನೇಮಕ ಮಾಡುತ್ತೇವೆ.
ವೇತನವನ್ನು ಪ್ರತಿ ತಿಂಗಳು ನಿಗದಿತ ಅವಧಿಯಲ್ಲಿಯೇ ನೀಡುವಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಹಾಗೂ ಸಾರಿಗೆ ಸಚಿವರು ನಿಗಮಗಳಲ್ಲಿನ ಕಾರ್ಮಿಕ ಸಂಘಗಳು ಮತ್ತು ಅಧಿಕಾರಿಗಳ ಸಭೆ ನಡೆಸಿ ತಿಳಿಸಿದ್ದರು.
ಆದರೆ, ಸೇವೆಯಿಂದ ವಜಾ ಆಗಿದ್ದ 2,200ಕ್ಕೂ ಹೆಚ್ಚು ಕಾರ್ಮಿಕರು ನೇಮಕಾತಿಗಾಗಿ ಕಾಯುತ್ತಿದ್ದರು. ಈ ತೀರ್ಮಾನದ ನಂತರ ಬಿಎಂಟಿಸಿ ಆಡಳಿತ ವರ್ಗ ಸುಮಾರು 57 ಕಾರ್ಮಿಕರನ್ನು ಪುನಃ ಸೇವೆಯಿಂದ ವಜಾ ಮಾಡಿದೆ.
ಕಾರ್ಮಿಕರನ್ನು ವಜಾ ಮಾಡುವುದೆಂದರೆ ಆಡಳಿತ ವರ್ಗಗಳು ನೀರು ಕುಡಿದಷ್ಟು ಸಲೀಸು ಮಾಡಿಕೊಂಡಿದ್ದಾರೆ. ಸಚಿವರು ತೀರ್ಮಾನ ತೆಗೆದುಕೊಂಡ ಒಂದು ತಿಂಗಳು ಕಳೆದರೂ ಜಾರಿಗೆ ಬಂದಿಲ್ಲ ಎಂದು ಆರೋಪಿಸಿದರು.
ಸಚಿವರ ಮಾತಿಗೆ ಹಾಗೂ ಅವರ ಇಚ್ಛಾಶಕ್ತಿ ಕೊರತೆಯಿಂದ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಸರ್ಕಾರ ಮತ್ತು ಆಡಳಿತ ವರ್ಗದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ಸೇವೆಯಿಂದ ವಜಾ ಮಾಡಿರುವ ಕಾರ್ಮಿಕರನ್ನು ಪುನರ್ ನೇಮಕದ ಆದೇಶ ನೀಡಬೇಕೆಂದು ಒತ್ತಾಯಿಸಿ ಅನಿರ್ದಿಷ್ಟ ಅವಧಿಯ ಸತ್ಯಾಗ್ರಹವನ್ನು ನಡೆಸುವುದಾಗಿ ಪ್ರತಿಭಟನಾ ನಿರತರು ತಿಳಿಸಿದರು.
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಅಪರಿಚಿತ ಮೃತ ದೇಹದ ಅಂಗಗಳು ಪತ್ತೆ : ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ