ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ 8 ದಿನ ಪೂರ್ಣಗೊಂಡಿದ್ದು, ನಾಳೆಯಿಂದ ಬೀದಿಗಿಳಿದು ಹೋರಾಡಲು ಮುಷ್ಕರ ನಿರತರು ತೀರ್ಮಾನಿಸಿದ್ದಾರೆ.
ಎಸ್ಮಾ ಜಾರಿ, ಸಿಬ್ಬಂದಿ ಅಮಾನತು ಸೇರಿದಂತೆ ಹಲವು ದಾರಿಗಳು ಸರ್ಕಾರದ ಮುಂದಿದ್ದರೂ, ಕಾನೂನು ಕ್ರಮಕ್ಕೆ ಒಂದು ಹಂತಕ್ಕೆ ಹಿಂದೇಟು ಹಾಕಲಾಗುತ್ತಿದೆ. ಸರ್ಕಾರ ಮಾತುಕತೆಗೂ ಮುಂದಾಗುತ್ತಿಲ್ಲ. ಇನ್ನೊಂದೆಡೆ ಕ್ರಮ ಕೈಗೊಂಡು ಸುದ್ದಿಯಾಗುತ್ತಲೂ ಇಲ್ಲ. ತೆಲಂಗಾಣ ರಾಜ್ಯದಲ್ಲಿ ನಡೆದ ಹೋರಾಟದ ಮಾದರಿಯಲ್ಲಿ ನಾವು ನಮ್ಮ ಹೋರಾಟ ಕೈಗೊಳ್ಳುತ್ತೇವೆ. 56 ದಿನಗಳಾದರೂ ತೊಂದರೆಯಿಲ್ಲ ಮುಂದುವರಿಸುತ್ತೇವೆ ಎಂದು ಹಠಕ್ಕೆ ಬಿದ್ದು ಕುಳಿತಿದ್ದಾರೆ.
ಸಾರಿಗೆ ಇತಿಹಾಸದಲ್ಲಿಯೇ ಇದುವರೆಗೂ ಎಸ್ಮಾ ಜಾರಿಗೊಳಿಸಿದ ಉದಾಹರಣೆ ಇಲ್ಲ. ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ವಿರುದ್ಧ ಇಂತಹದ್ದೊಂದು ಕ್ರಮ ಕೈಗೊಂಡು ರಾಜ್ಯದ ಇತಿಹಾಸದಲ್ಲೇ ನೆನಪಿನಲ್ಲಿ ಉಳಿದು ಹೋಗುವ ಸಾರಿಗೆ ಇಲಾಖೆ ಪ್ರಗತಿಗೆ ಮಾರಕವಾಗಬಲ್ಲ ಐತಿಹಾಸಿಕ ಕಾನೂನು ಕ್ರಮಕ್ಕೆ ಮುಂದಾಗಲು ಸರ್ಕಾರ ಹಿಂದೇಟು ಹಾಕುತ್ತಿದೆ. ಇನ್ನೇನು ಸಾಧ್ಯವಿಲ್ಲ, ಎಸ್ಮಾ ಜಾರಿ ಅನಿವಾರ್ಯ ಅನ್ನಿಸುವ ಸಂದರ್ಭದವರೆಗೂ ತಾಳ್ಮೆಯಿಂದ ಕಾಯಲು ತೀರ್ಮಾನಿಸಿದೆ. ಈಗಾಗಲೇ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ತರಬೇತಿ, ಪ್ರೊಬೇಷನರಿ ಹುದ್ದೆಯ ಸಿಬ್ಬಂದಿಯನ್ನು ಕೆಲಸದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಪ್ರತಿ ದಿನ ಒಂದಿಷ್ಟು ಮಂದಿಗೆ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ನೌಕರರಿಗೆ ಗುರುವಾರ ಸಂಜೆ 5 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ ಬಿಎಂಟಿಸಿ ಸಹ ಇಂದು ಆದೇಶ ಹೊರಡಿಸಿದೆ.
2,237 ನೌರರ ಹೆಸರು ಉಲ್ಲೇಖಿಸಿ ಆದೇಶ ಹೊರಡಿಸಿದ ಬಿಎಂಟಿಸಿ ಮುಷ್ಕರದಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ನೌಕರರು ತೊಂದರೆ ಉಂಟುಮಾಡಿದ್ದಾರೆ. ಅಲ್ಲದೇ ಹಿರಿಯ ನೌಕರರಾಗಿ ಸಂಸ್ಥೆ ವಿಶ್ವಾಸ ಕಳೆದುಕೊಂಡು ಸಂಸ್ಥೆಯು ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಮಾಡಿದ್ದಾರೆ. ಈ ಹಿನ್ನೆಲೆ 2,237 ಸಾರಿಗೆ ನೌಕರರು ಏಪ್ರಿಲ್ 15ರ ಸಂಜೆ 5ರೊಳಗೆ ತಮ್ಮ ಡಿಪೋಗಳಿಗೆ ಹಾಜರಾಗಬೇಕು. ಜೊತೆಗೆ ಯಾವ ಕಾರಣಕ್ಕೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಲಿಖಿತ ಸಮಜಾಯಿಷಿ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ದ ನಿಯಮಾವಳಿ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದೆ.
ಆದರೆ, ಸಾರಿಗೆ ನಿಗಮದ ನೋಟಿಸ್ಗೆ ನೌಕರರು ಬೆಲೆ ಕೊಡುತ್ತಿಲ್ಲ. ಈ ಹಿನ್ನೆಲೆ ಕಠಿಣ ಕ್ರಮಕ್ಕೆ ಸಹ ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ನೌಕರರು ಕರ್ತವ್ಯಕ್ಕೆ ಹಾಜರಾಗುವುದನ್ನು ತಡೆಯುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ. ಪ್ರತಿಭಟನಾಕಾರರ ಆಕ್ರೋಶಕ್ಕೆ ರಾಜ್ಯಾದ್ಯಂತ 60 ಬಸ್ಗಳು ಜಖಂ ಆಗಿವೆ. ಸಂಸ್ಥೆಗೆ ಸಾಕಷ್ಟು ನಷ್ಟವಾಗುತ್ತಿದೆ. ಇದರ ಪರಿಹಾರಕ್ಕೆ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಎಸ್ಮಾ ಜಾರಿಗೂ ಅವಕಾಶ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಶೀಘ್ರವೇ ಸರ್ಕಾರ ಸಾರಿಗೆ ನೌಕರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲಿದೆ ಎನ್ನುವ ಸೂಚನೆ ನೀಡಿದ್ದಾರೆ. ಸಾರಿಗೆ ಸಂಸ್ಥೆ ನೌಕರರು ತಮ್ಮ ನ್ಯಾಯಸಮ್ಮತ ಬೇಡಿಕೆ ಈಡೇರಿಸುವಂತೆ ಮುಷ್ಕರ ನಡೆಸುತ್ತಿದ್ದು, ಅದನ್ನು ಸರ್ಕಾರ ಈಡೇರಿಸದೇ ಇದ್ದು ಕಾರ್ಮಿಕರನ್ನು ಅಧಿಕಾರಿ ವರ್ಗವು ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ನೌಕರರ ಮೇಲೆ ದಬ್ಬಾಳಿಕೆ ನಡೆಸಿ ಕರ್ತವ್ಯಕ್ಕೆ ಕರೆತಂದು ನಿರಂತರ ದುಡಿಸಿಕೊಂಡು ನೌಕರರ ಕುಟುಂಬವನ್ನು ಸಹ ಭಯದ ವಾತಾವರಣದಲ್ಲಿರಿಸುವಂತೆ ಮಾಡಿದೆ ಎಂದು ಕಾಂಗ್ರೆಸ್ ಸಹ ಇನ್ನೊಂದೆಡೆ ಆರೋಪಿಸುತ್ತಿದೆ. ಸಾರಿಗೆ ನೌಕರರ ಪರವಾಗಿ ಹೋರಾಡುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಸಹ ತಾವು ಸರ್ಕಾರದ ಬೆದರಿಕೆಗೆ ಮಣಿಯಲ್ಲ. ನಾಳೆಯಿಂದ ಬೀದಿಗಿಳಿದು ಹೋರಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.