ಬೆಂಗಳೂರು: ಬೆಂಗಳೂರಿನ ರೈಲ್ವೆ ವಿಭಾಗದಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಅನ್ಯ ರಾಜ್ಯಕ್ಕೆ ವಿದ್ಯುತ್ ರಿಕ್ಷಾಗಳ ಸಾಗಣೆಗೆ ಮುಂದಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ 2030 ರ ವೇಳೆಗೆ ಭಾರತದಲ್ಲಿನ ಎಲ್ಲ ವಾಹನಗಳನ್ನು ವಿದ್ಯುತ್ ವಾಹನಗಳಾಗಿ ಪರಿವರ್ತಿಸುವ ದೃಷ್ಟಿಯನ್ನು ಹೊಂದಿದ್ದಾರೆ. ದೇಶದಲ್ಲಿ ಹೈಬ್ರಿಡ್ ಮತ್ತು ವಿದ್ಯುತ್ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯಾಪಾರ ಅಭಿವೃದ್ಧಿ ಘಟಕವು ಪ್ರಧಾನಮಂತ್ರಿಗಳ ಆಶಯ ನೆರವೇರಿಸುವ ನಿಟ್ಟಿನಲ್ಲಿ ಮತ್ತು ರೈಲ್ವೆ ವಿಭಾಗೀಯ ವ್ಯಸ್ಥಾಪಕ ಶ್ಯಾಮ್ ಸಿಂಗ್ ಮಾರ್ಗದರ್ಶನದಲ್ಲಿ ರಾಜಧಾನಿಯ ಬೊಮ್ಮಸಂದ್ರ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ ಉತ್ಪಾದನಾ ಘಟಕದ ಜೊತೆ ಒಡಂಬಡಿಕೆ ಮಾಡಿಕೊಂಡು ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಸಾಗಿಸಲು ಮುಂದಾಗಿದೆ ಎಂದು ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ : ಪ್ರೀತಿಸಿ ಮದುವೆಯಾದ ತಪ್ಪಿಗೆ ಪ್ರಾಣ ತೆತ್ತ ಯುವಕ
ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯ ತಂತ್ರಜ್ಞಾನದಲ್ಲಿ ಪ್ರವರ್ತಕರಾದ ಮಹೀಂದ್ರಾ ಎಲೆಕ್ಟ್ರಿಕ್ ನ ವಿದ್ಯುತ್ ಸಂಪರ್ಕಿತ ಚಲನಶೀಲತೆಯ ಹೊಸ ಮಾದರಿ ಬೆಂಬಲಿಸಲು ವಿದ್ಯುತ್ ವಾಹನಗಳ ವೈಯುಕ್ತಿಕ ಮತ್ತು ವಾಣಿಜ್ಯ ವಿಭಾಗಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ವಿಭಾಗದ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಮಹೀಂದ್ರಾದ ಟ್ರೀಯೊ ಬ್ರಾಂಡ್‌ನ 150 ಎಲೆಕ್ಟ್ರಿಕ್ ರಿಕ್ಷಾಗಳನ್ನು ಬಿಡದಿಯಿಂದ ತ್ರಿಪುರ ರಾಜ್ಯದಲ್ಲಿರುವ ಜಿರಾನಿಯಗೆ ಲೋಡ್ ಮಾಡುವ ಮೂಲಕ 24.79 ಲಕ್ಷ ರೂ ಗಳಿಕೆ ಸಾಧಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.