ಬೆಂಗಳೂರು: ಸಾರಿಗೆ ನೌಕರರು ಮತ್ತೆ ರಸ್ತೆಗಿಳಿದಿದ್ದಾರೆ. ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕೋವಿಡ್ ಬಂದಾಗಿನಿಂದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ನಷ್ಟದಲ್ಲಿವೆ. ಹೀಗಾಗಿ ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯುವ್ಯ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ಸೇರಿದಂತೆ ನಾಲ್ಕು ನಿಗಮಗಳನ್ನು ರದ್ದು ಮಾಡಿ ಒಂದೇ ನಿಗಮ ಮಾಡುವಂತೆ ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅನಂತ್ ಸುಬ್ಬರಾವ್, ಸಾರಿಗೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ನೌಕರರ ಸಮಸ್ಯೆ ಬಗೆಹರಿಯುತ್ತಿಲ್ಲ. ಮುಷ್ಕರದ ಸಮಯದಲ್ಲಿ ಕೆಲಸ ಕಳೆದುಕೊಂಡವರ ಮರು ನೇಮಕಾತಿ ಆದರೂ, ಸರ್ಕಾರ ಹಲವು ಷರತ್ತು ವಿಧಿಸಿದೆ. ತರಬೇತಿ ಮುಗಿಸಿರುವವರು ಮತ್ತೆ ತರಬೇತಿಗೆ ಒಳಗಾಗಬೇಕಾಗಿದೆ. ಇಂಕ್ರಿಮೆಂಟ್ ಕಟ್ ಮಾಡಲಾಗಿದೆ ಎಂದು ದೂರಿದರು.
ಇದನ್ನೂ ಓದಿ: 'ನಾಲ್ಕೇ ನಾಲ್ಕು ಆಂಧ್ರ ಗುತ್ತಿಗೆದಾರರು ಈ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ': ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ
ವಿಲೀನದಿಂದ ಮಾತ್ರ ಉಳಿಗಾಲ: ಸರಿಯಾದ ಸಮಯಕ್ಕೆ ಸಂಬಳ ಆಗುತ್ತಿಲ್ಲ. ನಾಲ್ಕು ನಿಗಮಗಳನ್ನು ವಿಲೀನ ಮಾಡಿದರೆ ವರ್ಷಕ್ಕೆ 200 ಕೋಟಿ ರೂ ಉಳಿತಾಯವಾಗುತ್ತದೆ. ಆಗ ಮಾತ್ರ ಸಾರಿಗೆ ನಿಗಮಗಳಿಗೆ ಉಳಿಗಾಲವಿದೆ. ಅದನ್ನು ಬಿಟ್ಟು ದುಂದುವೆಚ್ಚ ಮಾಡಿ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ಖಾಸಗಿ ಕಂಪನಿ ಚಾಲಕರನ್ನು ನೇಮಕ ಮಾಡುತ್ತಿದ್ದಾರೆ. ಸಾರಿಗೆ ನಿಗಮವನ್ನು ಖಾಸಗೀಕರಣ ಮಾಡಲು ಸರ್ಕಾರ ಹುನ್ನಾರ ನಡೆಯುತ್ತಿದೆ ಎಂದರು.