ಬೆಂಗಳೂರು : ಪಾದಚಾರಿಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಸುರಕ್ಷಿತವಾಗಿ ಅಳವಡಿಸುವ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸುವಂತೆ ಹೈಕೋರ್ಟ್ ಸೂಚಿಸಿದೆ.
ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿರುವ ಅಪಾಯಕಾರಿ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವು ಮಾಡುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.
ಬೆಸ್ಕಾಂ ಎಂಡಿ ರಾಜೇಶ್ ಗೌಡ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಲ್ಲಿಸಿದ್ದ ಪ್ರಮಾಣಪತ್ರ ದಾಖಲಿಸಿಕೊಂಡ ಪೀಠ, ನಗರದಲ್ಲಿ ಹೊಸ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲು ಹಾಗೂ ಈಗಾಗಲೇ ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಗೊಳಿಸಲು ಜಾಗ ಗುರುತಿಸಲು ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳನ್ನೊಳಗೊಂಡ ಸಮನ್ವಯ ಸಮಿತಿ ರಚಿಸುವಂತೆ ಸೂಚಿಸಿ, ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಿತು.
ಮಾರ್ಚ್ 16ರಂದು ನಡೆದಿದ್ದ ವಿಚಾರಣೆ ವೇಳೆ ಬೆಸ್ಕಾಂ ಪರ ವಕೀಲರು ಟೆಲಿಗ್ರಾಫ್ ಕಾಯ್ದೆಯಡಿ ವಿದ್ಯುತ್ ಟ್ರಾನ್ಸಫಾರ್ಮರ್ಗಳನ್ನು ಅಳವಡಿಸಲು ಬಿಬಿಎಂಪಿಯ ಅನುಮತಿ ಕಡ್ಡಾಯವಲ್ಲ ಎಂದು ತಿಳಿಸಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಹಾಗಾದರೆ ರಸ್ತೆ ಮಧ್ಯೆಯೂ ಟ್ರಾನ್ಸ್ ಫಾರ್ಮರ್ ಹಾಕುತ್ತೀರಾ ಎಂದು ಪ್ರಶ್ನಿಸಿತ್ತಲ್ಲದೇ, ಈ ಸಂಬಂಧ ಸ್ಪಷ್ಟನೆ ನೀಡುವಂತೆ ಬೆಸ್ಕಾಂ ಎಂಡಿಗೆ ನಿರ್ದೇಶಿಸಿತ್ತು. ಹಾಗೆಯೇ ಪಾದಚಾರಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತರಿಂದಲೂ ಪ್ರಮಾಣಪತ್ರ ಕೇಳಿತ್ತು.
ಬೆಸ್ಕಾಂ ಎಂಡಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರು ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದು, ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಪೂರಕವಾಗಿ ಟ್ರಾನ್ಸ್ ಫಾರ್ಮರ್ಗಳನ್ನು ಅಳವಡಿಸಲಾಗುತ್ತದೆ. ಈಗಾಗಲೇ ಅಸ್ಥಿತ್ವದಲ್ಲಿರುವ ಟ್ರಾನ್ಸ್ ಫಾರ್ಮರ್ಗಳನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಲು ಹಾಗೂ ಹೊಸದಾಗಿ ಟ್ರಾನ್ಸ್ ಫಾರ್ಮರ್ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಕೆಲಸವನ್ನು ಸಮರ್ಥವಾಗಿ ನಿಭಾಯಿಸಲು ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.