ಬೆಂಗಳೂರು : ಸಂಚಾರಿ ಪೊಲೀಸರಿಂದ ದಂಡ ತಪ್ಪಿಸಲು ಒಂದೇ ಬೈಕಿಗೆ ಎರಡು ನಂಬರ್ ಪ್ಲೇಟ್ ಹಾಕಿಕೊಂಡಿದ್ದ ವ್ಯಕ್ತಿಯನ್ನು ರಾಜಾಜಿನಗರ ಸಂಚಾರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಮರಿಗೌಡ (31) ಎಂದು ಗುರುತಿಸಲಾಗಿದೆ.
ಆರೋಪಿ ಹೊಂದಿದ್ದ ಬುಲೆಟ್ ಬೈಕಿನ ದಾಖಲೆಗಳ ಪ್ರಕಾರ ನಂಬರ್ KA 05 JS 7536 ಎಂದಿದ್ದರೆ ಹಿಂಬದಿ ಪ್ಲೇಟ್ ನಲ್ಲಿ 7538 ಎಂದು ನಂಬರನ್ನು ನಮೂದಿಸಲಾಗಿತ್ತು. ಇದೇ ತಿಂಗಳ 29ರಂದು ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಕೂಲಿನಗರ ಸೇತುವೆ ಬಳಿ ಕರ್ತವ್ಯದಲ್ಲಿದ್ದ ರಾಜಾಜಿನಗರ ಸಂಚಾರಿ ಠಾಣಾ ಹೆಡ್ ಕಾನ್ಸ್ಟೇಬಲ್ ಸೈಯದ್ ನವಾಜ್ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದರು.
ಆರೋಪಿಯ ಬೈಕಿನ ಮುಂದಿನ ನಂಬರ್ ಪ್ಲೇಟ್ ಮೇಲೆ 19,500 ರೂ. ದಂಡವಿದ್ದರೆ, ಹಿಂದಿನ ನಂಬರ್ ಪ್ಲೇಟ್ ಗೆ 9,500 ದಂಡ ಪಾವತಿಸಲು ಬಾಕಿ ಇದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ರಾಜಾಜಿನಗರ ಸಂಚಾರಿ ಪೊಲೀಸರು, ನಂದಿನಿ ಲೇಔಟ್ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.