ಬೆಂಗಳೂರು: ಸರ್ಕಾರ ಕೋವಿಶೀಲ್ಡ್, ಕೋವ್ಯಾಕ್ಸಿನ್ ಇದೀಗ ಸ್ಪುಟ್ನಿಕ್ ಲಸಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಈ ಲಸಿಕೆಯನ್ನು ಅತೀ ಕಡಿಮೆ ತಾಪಮಾನದಲ್ಲಿ ಇರಿಸಬೇಕು. ಬೇರೆಲ್ಲೂ ಇರಿಸಲು ಸಾಧ್ಯವಿಲ್ಲ. ಇದನ್ನರಿತ ಅಡ್ರೆಸ್ ಹೆಲ್ತ್ ಎಂಬ ಸಂಸ್ಥೆ ನೂತನ ಆವಿಷ್ಕಾರ ಮಾಡುವ ಮೂಲಕ ಲಸಿಕೆಯನ್ನು ಸ್ಟೋರ್ ಮಾಡುವ ವಿಧಾನವನ್ನು ತಿಳಿಸಿದೆ.
ಸ್ಪುಟ್ನಿಕ್ ಲಸಿಕೆಯನ್ನು ಅತೀ ಕಡಿಮೆ ತಾಪಮಾನದಲ್ಲಿ ಇರಿಸಬೇಕಾಗುತ್ತದೆ. ಹೀಗಿರುವಾಗ ಈ ಲಸಿಕೆ ಆಸ್ಪತ್ರೆಗಳನ್ನು ಹೊರತುಪಡಿಸಿ ಇನ್ನಿತರೆ ಸ್ಥಳಗಳಲ್ಲಿ ಲಸಿಕೆ ಕೊಡಿಸಲಾಗುವುದಿಲ್ಲ. ಹೀಗಾಗಿ ಬೆಂಗಳೂರು ಮೂಲದ ಅಡ್ರೆಸ್ ಹೆಲ್ತ್ ಎಂಬ ಸಂಸ್ಥೆ ನೂತನ ಅವಿಷ್ಕಾರ ಮಾಡಿದ್ದು, 0 ಸೆಂಟಿಗ್ರೇಡ್‌ಗೂ ಕಡಿಮೆ ತಾಪಮಾನ ಹೊಂದಿರುವಂತಹ ಸಂಚಾರಿ ಶೀತಲಗಾರ ವಾಹನವನ್ನು ಸೃಷ್ಟಿಸಿದ್ದಾರೆ.
ಈ ವಾಹನ ಐಸ್ಲೈನ್ ಬಳಸಿಕೊಳ್ಳುವ ಡೀಪ್ ಫ್ರೀಜರ್‌ಗಳನ್ನು ಹೊಂದಿದ್ದು, ಇವು -18 ರಿಂದ -25 ಡಿಗ್ರಿ ಸೆಂಟಿಗ್ರೇಡ್‍ಗಳವರೆಗಿನ ತಾಪಮಾನವನ್ನು 8 ಗಂಟೆಗಳಿಗೂ ಹೆಚ್ಚಿನ ಕಾಲ ಯಾವುದೇ ಪವರ್ ಬ್ಯಾಕ್‍ಅಪ್ ಇಲ್ಲದೆ ಉಳಿಸಿಕೊಳ್ಳಬಲ್ಲದು. ಇದರಿಂದ ಸ್ಪುಟ್ನಿಕ್ v ಲಸಿಕೆಯನ್ನು ಅದರ ಸಾಮರ್ಥ್ಯಕ್ಕೆ ಕುಂದು ಬರದಂತೆ ಉಳಿಸಿಕೊಂಡು ಶಾಲೆಗಳು, ಅಪಾರ್ಟ್‍ಮೆಂಟ್‍ಗಳು ಮತ್ತು ಕಾರ್ಯ ಸ್ಥಳಗಳಲ್ಲಿ ಜನರ ಮನೆ ಬಾಗಿಲಿಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ.
ಇನ್ನು ಕೋವ್ಯಾಕ್ಸಿನ್, ಕೋವಿಶೀಲ್ಡ್ ಜೊತೆಗೆ ಮೂರನೇ ಲಸಿಕೆಯಾದ ಸ್ಪುಟ್ನಿಕ್ v ಗೆ ಒಪ್ಪಿಗೆ ನೀಡಲಾಗಿದ್ದು, ಹೆಚ್ಚಿನ ಜನರಿಗೆ ಕ್ಷಿಪ್ರವಾಗಿ ಲಸಿಕೆ ತಲುಪಿಸಬಹುದಾದ ನಿರೀಕ್ಷೆ ಇದೆ. ಇದರಿಂದ ಹೆಚ್ಚಿನ ಜನರು ಲಸಿಕೆ ಪಡೆಯುವ ಅವಕಾಶ ಸಿಗಲಿವೆ. ಆದರೆ ಸ್ಪುಟ್ನಿಕ್ v ಲಸಿಕೆಯನ್ನು -18 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ದಾಸ್ತಾನು ಮಾಡಬೇಕಲ್ಲದೆ, ಶೀತಲಗಾರರಿಂದ ಹೊರತೆಗೆದು 2 ಗಂಟೆಗಳ ಒಳಗೆ ಲಸಿಕೆಯನ್ನು ಜನರಿಗೆ ನೀಡುವ ಅಗತ್ಯವಿರುತ್ತದೆ. ಹೀಗಾಗಿ ಪ್ರಸ್ತುತ ಸ್ಪುಟ್ನಿಕ್v ಲಸಿಕೆಯನ್ನು ಬೃಹತ್ ಆಸ್ಪತ್ರೆಗಳಿಗೆ ಮಾತ್ರ ವಿತರಿಸಲಾಗುತ್ತಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಶೇ.50ರಷ್ಟು ವಯಸ್ಕರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಲಾಗಿದೆ. ಈ ನವೀನತೆ ಹೆಚ್ಚು ಜನರನ್ನು ತಲುಪಲು ನೆರವಾಗಲಿದೆ.