ಬೆಂಗಳೂರು: ಐಎಂಎ ಮಾದರಿಯಲ್ಲಿ ಇನ್ನೂ ಅನೇಕ ಸಂಸ್ಥೆಗಳು ರಾಜ್ಯಾದ್ಯಂತ ಜನರಿಗೆ ಮೋಸ ಮಾಡಿವೆ. ಇಂತಹ ವಂಚನೆ, ಅಪರಾಧ ಪ್ರಕರಣಗಳ ಸಮಗ್ರ ತನಿಖೆಗೆ ತಜ್ಞರ ಸಮಿತಿ ರಚಿಸುತ್ತೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ತಮ್ಮ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆದಷ್ಟು ಬೇಗ ಇಂತಹ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲೇಬೇಕಿದೆ. ನಾವು ಈ ನಿಟ್ಟಿನಲ್ಲಿ ಗಂಭೀರವಾಗಿದ್ದು, ಈ ಬಗ್ಗೆ ನಾಳೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜತೆ ಚರ್ಚಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಐಎಂಎ ಜ್ಯುವೆಲ್ಲರ್ಸ್ ಮಾಲೀಕ ನಾಪತ್ತೆಯಾಗಿದ್ದು ಗಮನಕ್ಕೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಧಿಕೃತವಾಗಿ ನಮಗೆ ಮಾಲೀಕನ ಮಾಹಿತಿ ಸಿಕ್ಕಿಲ್ಲ. ಎಲ್ಲಿದ್ದಾರೆ ಎಂದು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದೇವೆ. ದೇಶ ಬಿಟ್ಟಿರುವ ಬಗ್ಗೆಯೂ ಮಾಹಿತಿ ಇಲ್ಲ. ಎಲ್ಲೇ ಇದ್ದರೂ ಪತ್ತೆ ಹಚ್ಚಿ ಕರೆತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಈ ವಿಚಾರದಲ್ಲಿ ಜನ ಆತಂಕಗೊಳ್ಳುವುದು ಬೇಡ. ಇದೇ ರೀತಿ ವಿನಿವಿಂಕ್, ಆಂಬಿಡೆಂಟ್ ಪ್ರಕರಣಗಳೂ ನಡೆದಿವೆ. ಇವುಗಳಿಂದ ಅಲ್ಪಸಂಖ್ಯಾತರಿಗೆ ದೊಡ್ಡ ಸಂಖ್ಯೆಯಲ್ಲಿ ನಷ್ಟ ಆಗಿರಬಹುದು. ರಾಜ್ಯದಲ್ಲಿ ಇಂತಹ ನೂರಾರು ಪ್ರಕರಣಗಳು ನಡೆದಿದ್ದು, ಪ್ರಕರಣಗಳ ಹಿನ್ನೆಲೆ ಆಧರಿಸಿ ಆರ್ಥಿಕ ತಜ್ಞರು, ನ್ಯಾಯಾಧೀಶರಿಂದ ಕಾನೂನು ಮಾಹಿತಿ ಪಡೆದು ವಿಶೇಷ ತಂಡ ರಚಿಸಿ ತನಿಖೆ ಮಾಡಿಸುತ್ತೇವೆ ಎಂದು ಅಭಯ ನೀಡಿದರು.
ಇನ್ನು ಈ ಬಗ್ಗೆ ಉನ್ನತ ತನಿಖೆ ನಡೆಸುವಂತೆ ಡಿಜಿ ಅವರಿಗೆ ಸೂಚಿಸಿದ್ದೇನೆ. ಐಎಂಎ ಜ್ಯುವಲೆರ್ಸ್ ಮಾಲೀಕ ಬೆಂಗಳೂರು ಪೊಲೀಸ್ ಕಮಿಷನರ್ಗೆ ಒಂದು ಆಡಿಯೋ ಕ್ಲಿಪ್ ಕಳುಹಿಸಿದ್ದು, ಆಡಿಯೋ ವೈರಲ್ ಆದ ಬಳಿಕವೆ ಹೂಡಿಕೆದಾರರು ಪ್ರತಿಭಟನೆ ನಡೆಸ್ತಿದ್ದಾರೆ. ಎಲ್ಲರಿಗೂ ಪರಿಹಾರ ನೀಡುತ್ತೇವೆ. ಇನ್ನಾದರೂ ಹಣಕ್ಕೆ ಜಾಸ್ತಿ ಬಡ್ಡಿ ಕೊಡ್ತೇವೆ. ದ್ವಿಗುಣ ಮಾಡಿಕೊಡ್ತೇವೆ ಅಂತ ಜನರಿಗೆ ಮೋಸ ಮಾಡೋರ ಬಗ್ಗೆ ಎಚ್ಚರವಾಗಿರಬೇಕಾಗುತ್ತದೆ ಎಂದರು.