ಬೆಂಗಳೂರು: ವಿವಿಧ ಸಂಘಟನೆಗಳು ಇಂದು ನಗರದಲ್ಲಿ ಹಮ್ಮಿಕೊಂಡ ರೈತ ಗಣತಂತ್ರ ಪಥಸಂಚಲನದಿಂದಾಗಿ ಮತ್ತೊಮ್ಮೆ ಶೇಷಾದ್ರಿ ರಸ್ತೆ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಒಂದು ವಾರದ ಅಂತರದಲ್ಲಿ ಎರಡು ಬಾರಿ ಈ ರಸ್ತೆ ಸಂಚಾರ ಮುಕ್ತವಾಗಿದೆ.
ಜ. 20ರಂದು ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ್ಯಾಲಿ ಕಾರಣ ಶೇಷಾದ್ರಿ ರಸ್ತೆ ಸಂಚಾರ ಮುಕ್ತವಾಗಿತ್ತು. ಮಂಗಳವಾರ ಕೂಡ ಇದೇ ಕಾರಣ ಮುಂದಿಟ್ಟುಕೊಂಡು ವಿವಿಧ ಸಂಘಟನೆಗಳು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಗಣತಂತ್ರ ರ್ಯಾಲಿ ಹಮ್ಮಿಕೊಂಡಿದ್ದವು.
ನಗರದ ವಿವಿಧ ಭಾಗಗಳಿಂದ ಸಂಘಟನೆಯ ಮುಖಂಡರು ಕಾರ್ಯಕರ್ತರೊಂದಿಗೆ ನಗರದ ಕೇಂದ್ರ ಭಾಗಕ್ಕೆ ಆಗಮಿಸಿ ಸಮಾವೇಶಗೊಂಡು ಅಲ್ಲಿಂದ ಮಧ್ಯಾಹ್ನ 1 ಗಂಟೆಗೆ ರ್ಯಾಲಿ ಆರಂಭಿಸಿದರು. ಸಂಜೆ 6 ಗಂಟೆಯವರೆಗೆ ರ್ಯಾಲಿ ಮುಂದುವರೆಯಿತು. ಮೆರವಣಿಗೆ ಆರಂಭಕ್ಕೆ ಒಂದು ಗಂಟೆಗೂ ಮುನ್ನ ವಾಹನ ಸಂಚಾರವನ್ನು ಶೇಷಾದ್ರಿ ರಸ್ತೆಯಲ್ಲಿ ನಿಲ್ಲಿಸಲಾಯಿತು.
ಸಂಘಟನೆಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶ ಮುಗಿಸಿದ ಒಂದು ಗಂಟೆಯ ನಂತರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಆರಂಭಿಸಲಾಯಿತು. ಈ ರೀತಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಫ್ರೀಡಂ ಪಾರ್ಕ್ ಹೊರಗಿನ ಶೇಷಾದ್ರಿ ರಸ್ತೆಯಲ್ಲಿ 7 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಗುರುತಿಸಲಾಗಿತ್ತು. ಹೀಗಾಗಿ ಹಲವೆಡೆ ಸಂಚಾರ ದಟ್ಟಣೆ ಕೂಡ ಉಂಟಾಯಿತು.