ಬೆಂಗಳೂರು: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಮುಂದಿನ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬುದರ ಕುರಿತು ಬಹಳ ಕುತೂಹಲ ಕೆರಳಿಸಿತ್ತು.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದ ಸೋಲು ಎದುರಿಸಬೇಕಾಯಿತು. ಇದರ ಸಂಪೂರ್ಣ ಹೊಣೆ ಹೊತ್ತ ಅಂದಿನ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ದೆಹಲಿಯಲ್ಲಿ ಶನಿವಾರ ನಡೆಯುತ್ತಿರುವ ಕಾಂಗ್ರೆಸ್ ಸಿಡಬ್ಲ್ಯೂಸಿ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ ಯಾರಿಗೆ ಸಿಗಲಿದೆ ಎಂಬುದು ಅಂತಿಮವಾಗಲಿದ್ದು. ಮೂವರು ದಲಿತರು ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ.
ಸಂಜೆಯೊಳಗೆ ಕೈ ರಾಷ್ಟ್ರೀಯ ಅಧ್ಯಕ್ಷ ಯಾರು ಎಂಬುದು ತಿಳಿಯಲಿದೆ. ಸದ್ಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಆಯ್ಕೆಗೆ ಮುಂಚೂಣಿಯಲ್ಲಿರುವ ನಾಯಕರೆಂದರೆ, ಮಹಾರಾಷ್ಟ್ರ ಮೂಲದ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಕರ್ನಾಟಕದ ಒಬ್ಬರು ಮುಂಚೂಣಿಯಲ್ಲಿದ್ದಾರೆ. ನಾಯಕರಾದ ಸುಶೀಲ್ ಕುಮಾರ್ ಶಿಂಧೆ, ಮುಕುಲ್ ವಾಸ್ನಿಕ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಹೆಸರು ಕೇಳಿ ಬರುತ್ತಿದೆ.
ಸುಶೀಲ್ ಕುಮಾರ್ ಶಿಂಧೆ ಹೆಸರು ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದ್ದು. ಯುವಕರಿಗೆ ಆದ್ಯತೆ ನೀಡಬೇಕು ಎಂದಾದರೆ ಮುಕುಲ್ ವಾಸ್ನಿಕ್ ಆಯ್ಕೆ ಆಗಬಹುದು. ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಮಾನ ಅವಕಾಶವಿದ್ದು. ಪಕ್ಷದಲ್ಲಿ ಹಿರಿತನ ಹಾಗೂ ಕಳೆದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ.
ನಾಲ್ವರು ಕಾರ್ಯಾಧ್ಯಕ್ಷರು: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಜತೆ ನಾಲ್ವರು ಕಾರ್ಯಾಧ್ಯಕ್ಷರನ್ನ ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು. ಈ ಸ್ಥಾನಕ್ಕೆ ಕರ್ನಾಟಕದವರಾದ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರ ಹೆಸರು ಕೇಳಿ ಬರುತ್ತಿದೆ. ರಾಜ್ಯವಾರು ಹಾಗೂ ಪ್ರಾದೇಶಿಕವಾರು ಈ ಸ್ಥಾನದ ಹಂಚಿಕೆ ಆಗಲಿದೆ. ಕರ್ನಾಟಕದಿಂದ ಸುದೀರ್ಘ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಹಾಗೂ ಡಿಸಿಎಂ ಆಗಿ ಕಳೆದ ಮೈತ್ರಿ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದರು.
ಶನಿವಾರ ಸಂಜೆಯೊಳಗೆ ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ.