ಬೆಂಗಳೂರು : ಮಹಾನಗರದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿದ್ದು ಸುಮಾರು ಈವರೆಗೂ 60ಕ್ಕಿಂತ ಹೆಚ್ಚು ಪೊಲೀಸರು ಕ್ವಾರಂಟೈನ್ ಒಳಗಾಗಿದ್ದಾರೆ. ಸರಗಳ್ಳತನ ಮಾಡಿ ಬಂಧಿತನಾಗಿದ್ದ ಆರೋಪಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ತಿಲಕ್‌ನಗರ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್ಡೌನ್ ಮಾಡಲಾಗಿದೆ.
ತಿಲಕ್‌ನಗರ ಠಾಣೆ ಆರಕ್ಷಕ ಅಧಿಕಾರಿ ಸೇರಿ ಆರೋಪಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಮಂದಿ ಪೊಲೀಸರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ವಾರಂಟೈನ್ಗೆ ಒಳಪಡಿಸಿದ್ದಾರೆ. ನಗರದಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಬೈಕ್ನಲ್ಲಿ ತೆರಳಿ ಆರೋಪಿ ಸರಗಳ್ಳತನ ಮಾಡುತ್ತಿದ್ದ. ತಿಲಕ್‌ನಗರ ಹಾಗೂ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ತಿಲಕ್‌ನಗರ ಪೊಲೀಸರು ತನಿಖೆ ನಡೆಸಿ ಆರೋಪಿಯಿಂದ ಸುಮಾರು 70 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ. ಬಳಿಕ ಆರೋಪಿಯ ಸ್ಯ್ವಾಬ್ ಟೆಸ್ಟ್ ಮಾಡಿಸಿದಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಪೊಲೀಸ್ ಠಾಣೆಯನ್ನು ಸಂಪೂರ್ಣ ಸ್ಯಾನಿಟೈಸಿಂಗ್ ಮಾಡಿ, ತಾತ್ಕಾಲಿಕವಾಗಿ ಸೀಲ್ಡೌನ್ ಮಾಡಲಾಗಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಬ್ಬನ್‌ಪಾರ್ಕ್ ಠಾಣಾ ಸಿಬ್ಬಂದಿಗೆ ಕೊರೊನಾ ಸೋಂಕು ಕಂಡು ಬಂದಿದ್ದರಿಂದ ಏಳು ದಿನಗಳ ಕಾಲ ಠಾಣೆಯನ್ನು ಸೀಲ್ಡೌನ್ ಮಾಡಲಾಗಿತ್ತು.