ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ಇಂದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನಗರದಲ್ಲಿ ಸುಮಾರು 10 ಸಾವಿರ ರೈತರು ಪ್ರತಿಭಟನಾ ರ‍್ಯಾಲಿ ನಡೆಸಲಿದ್ದಾರೆ. ವಿಧಾನಸೌಧ ಹಾಗೂ ರಾಜಭವನ ಬಳಿ ಬಾರುಕೋಲು ಚಳವಳಿ ಮಾಡುವ ಕಾರಣ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ರೈತರ ಹೋರಾಟಕ್ಕೆ ಕಾಂಗ್ರೆಸ್ ಹಾಗೂ ಕರವೇ ಸಂಘಟನೆಗಳು ಬೆಂಬಲ ನೀಡಿದ್ದು, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಕ್ರಾಂತಿವೀರ ರೈಲ್ವೆ ನಿಲ್ದಾಣ ಹಾಗೂ ಕಾರ್ಪೊರೇಷನ್ ನಿಂದ ರಾಜಭವನಕ್ಕೆ ಮೆರವಣಿಗೆ ಮೂಲಕ ರೈತರು ತೆರಳಲಿದ್ದಾರೆ. ನಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.
ಓದಿ :ಇಂದು ರೈತರಿಂದ ಬಾರುಕೋಲು ಚಳವಳಿ: ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್
ಸದ್ಯ ಸಾವಿರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗಾಗಿ ನಿಯೋಜನೆ ಮಾಡಿದ್ದು, ಏಳು ಡಿಸಿಪಿ, ಇನ್ಸ್ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್, ಕಾನ್ಸ್‌ಟೇಬಲ್, ಮಹಿಳಾ ಪೊಲೀಸರು, ಹೊಯ್ಸಳ, ಕೆ ಎಸ್ ಆರ್ ಪಿ, ಅಶ್ರುವಾಯು, ವಾಟರ್ ಜೆಟ್ ವಾಹನವನ್ನು ನಿಯೋಜಿಸಲಾಗಿದೆ. ಸದ್ಯ ಅಧಿವೇಶನ ನಡೆಯುತ್ತಿರುವ ಕಾರಣ ಓರ್ವ ಡಿಸಿಪಿ ನೇತೃತ್ವದಲ್ಲಿ ವಿಧಾನಸೌಧದ ಹತ್ತಿರ ಎರಡು ಆ್ಯಂಬುಲೆನ್ಸ್, ಒಂದು ಅಗ್ನಿಶಾಮಕ ದಳದ ವಾಹನವನ್ನು ನಿಲ್ಲಿಸಲಾಗಿದೆ.