ಬೆಂಗಳೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಆಂಜನೇಯ ದೇವಸ್ಥಾನದ ಬಳಿಯಲ್ಲಿರುವ ಮನೆಯಲ್ಲಿ ನಡೆದಿದೆ. ತಾಯಿ ಯಶೋಧಾ (72), ಮಗಳು ಸುಮನ್ ಗುಪ್ತಾ (32) ಹಾಗೂ ಮಗ ನರೇಶ್ ಗುಪ್ತಾ (36) ಆತ್ಮಹತ್ಯೆ ಮಾಡಿಕೊಂಡವರು.
ತಾಯಿ ಯಶೋಧಾ ಜೊತೆಯಲ್ಲೇ ವಾಸವಿದ್ದ ಸುಮನ್ ಗುಪ್ತಾ ಹಾಗೂ ನರೇಶ್ ಗುಪ್ತಾ ಇಬ್ಬರೂ ಸಹ ಮದುವೆಯಾಗಿರಲಿಲ್ಲ. ಮತ್ತೋರ್ವ ಪುತ್ರಿ ಅಪರ್ಣಾ ಗುಪ್ತಾಗೆ ವಿವಾಹವಾಗಿದ್ದು ರಾಜಾಜಿನಗರದಲ್ಲಿ ನೆಲೆಸಿದ್ದರು. ನರೇಶ್ ಗುಪ್ತಾ ಕಾಂಟ್ರಾಕ್ಟರ್ ಕೆಲಸ ಮಾಡುತ್ತಿದ್ದರು.
ಕಳೆದ ನಾಲ್ಕು ತಿಂಗಳಿನಿಂದ ಯಶೋಧಾ ಕುಟುಂಬ ಮಹಾಲಕ್ಷ್ಮಿ ಲೇಔಟ್ ಏಕಾಂಗ್ಷ್ ಅಪಾರ್ಟ್ಮೆಂಟಿನಲ್ಲಿ ವಾಸವಾಗಿತ್ತು. ಶನಿವಾರ ಅಪರ್ಣಾಗೆ ಕರೆ ಮಾಡಿ ಇಡೀ ಮನೆಯವರು ಮಾತನಾಡಿದ್ದಾರೆ. ಆದರೆ ಅದಾದ ಬಳಿಕ ಯಾರೂ ಸಹ ಕರೆ ಸ್ವೀಕರಿಸಿರಲಿಲ್ಲ. ಗಾಬರಿಗೊಂಡ ಅಪರ್ಣಾ ಬಂದು ನೋಡಿದಾಗ ಮೂವರ ಶವ ಪತ್ತೆಯಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ನರೇಶ್ ಗುಪ್ತಾ ಸಾಲ ಮಾಡಿಕೊಂಡಿದ್ದು, ಹಣಕಾಸಿನ ಸಮಸ್ಯೆಯೇ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಮೂವರ ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಅಪರ್ಣಾರಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ; ಮಾದನಾಯಕನಹಳ್ಳಿ ಪೊಲೀಸರಿಂದ ಆರೋಪಿಗಳ ಬಂಧನ