ಬೆಂಗಳೂರು : ಹಣಕ್ಕಾಗಿ ಮಾಲೀಕನಿಗೆ ಕರೆ ಮಾಡಿ ತಾನು ಅಪಹರಣಕ್ಕೊಳಗಾಗಿದ್ದು ಹಣ ನೀಡಿದರೆ ಬಿಟ್ಟು ಬಿಡುತ್ತಾರೆ ಎಂದು ಸುಳ್ಳು ಕಥೆ ಕಟ್ಟಿದ್ದ ಕೆಲಸಗಾರ ಸೇರಿ ಮೂವರನ್ನು ಆರ್.ಟಿ.ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಆರ್.ಟಿ.ನಗರದ ನಿವಾಸಿ ಮೊಹಮ್ಮದ್ ಆಸೀಫ್ ಹಬೀಬ್ ಎಂಬವರು ನೀಡಿದ ದೂರಿನ ಮೇರೆಗೆ ಬಿಹಾರ ಮೂಲದ ನೂರುಲ್ಲಾ ಹಸನ್, ಅಬೂಬುಕರ್ ಹಾಗು ಆಲಿರೇಜಾ ಎಂಬುವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ದೂರುದಾರ ಹಬೀಬ್ ತಂದೆ ಆರ್.ಟಿ.ನಗರದಲ್ಲಿ ಫ್ಯಾಕ್ಟರಿಯೊಂದರ ಮಾಲೀಕರಾಗಿದ್ದು, ನೂರುಲ್ಲಾ ಹಸನ್ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಈತ ಉಳಿದುಕೊಳ್ಳಲು ದಿನ್ನೂರು ಬಳಿ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದುದರಿಂದ ಮಗನ ರೀತಿ ಮಾಲೀಕರು ನೋಡಿಕೊಂಡಿದ್ದರು. ಮಾಲೀಕರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಹೆಚ್ಚಿನ ಹಣ ಸಂಪಾದಿಸುವ ದುರುದ್ದೇಶ ಹೊಂದಿದ್ದ ನುರುಲ್ಲಾ ಇದಕ್ಕಾಗಿ ತನ್ನನ್ನೇ, ತಾನು ಕಿಡ್ನ್ಯಾಪ್ ಆಗಿರುವುದಾಗಿ ಕಥೆ ಹೆಣೆದಿದ್ದ. ಇದಕ್ಕಾಗಿ ಆರೋಪಿಗಳನ್ನು ಒಗ್ಗೂಡಿಸಿಕೊಂಡು ವ್ಯೂಹ ರಚಿಸಿಕೊಂಡಿದ್ದ.
ಈ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಪ್ರತಿಕ್ರಿಯಿಸಿದ್ದು, "ಸೆ. 26 ರಂದು ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದ ಆರೋಪಿ ನುರುಲ್ಲಾ, ಅಂದು ರಾತ್ರಿ 10 ಗಂಟೆಗೆ ಮಾಲೀಕರಿಗೆ ಕರೆ ಮಾಡಿ ಯಾರೋ ವ್ಯಕ್ತಿಗಳು ತನ್ನನ್ನು ಅಪಹರಿಸಿದ್ದಾರೆ. 2 ಲಕ್ಷ ಹಣ ನೀಡಿದರೆ ಬಿಟ್ಟು ಕಳುಹಿಸುತ್ತಾರೆ. ಹೀಗಾಗಿ ತನ್ನ ಬ್ಯಾಂಕ್ ಖಾತೆಗೆ 2 ಲಕ್ಷ ಹಣ ನೀಡುವಂತೆ ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಕೆಲ ಹೊತ್ತಿನ ಬಳಿಕ ಫೋನ್ ಮಾಡಿ ನೂರುಲ್ಲಾಗೆ 2 ಲಕ್ಷ ಹಣ ನೀಡುತ್ತೇನೆ. ಆದರೆ, ನಿನ್ನ ಬ್ಯಾಂಕ್ ಖಾತೆಗೆ ಕಳುಹಿಸುವ ಬದಲು ಅಪಹರಣಕಾರರ ಬ್ಯಾಂಕ್ ಖಾತೆ ಸಂಖ್ಯೆ ನೀಡುವಂತೆ ಹೇಳಿದ್ದರು. ಇದಕ್ಕೊಪ್ಪದೆ ತನ್ನ ಅಕೌಂಟ್ಗೇ ಹಣ ಕಳಿಸಬೇಕೆಂದು ಹೇಳಿದ್ದ. ಅನುಮಾನಗೊಂಡ ಮಾಲೀಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು".
"ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮೊಬೈಲ್ ನೆಟ್ವರ್ಕ್ ಬಗ್ಗೆ ಜಾಲಾಡಿದಾಗ ಮಂಡ್ಯದಲ್ಲಿರುವುದು ಗೊತ್ತಾಗಿತ್ತು. ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಹೋಗಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಮಂಡ್ಯ ಪೊಲೀಸರು ಆರೋಪಿಗಳನ್ನು ಆರ್.ಟಿ.ನಗರ ಪೊಲೀಸರಿಗೆ ಸುಪರ್ದಿಗೆ ಒಪ್ಪಿಸಿದ್ದಾರೆ".
"10 ವರ್ಷಗಳಿಂದ ಕೆಲಸ ಮಾಡುತ್ತಿದ್ದ ನೂರುಲ್ಲಾ ತನ್ನ ಹುಟ್ಟೂರಿಗೆ ತೆರಳಲು ನಿರ್ಧರಿಸಿದ್ದ. ಇತರೆ ಆರೋಪಿಗಳು ಇದಕ್ಕೆ ಸಾಥ್ ನೀಡಿದ್ದರು. ಊರಿಗೆ ಹೋಗುವಾಗ ದೊಡ್ಡ ಪ್ರಮಾಣದಲ್ಲಿ ಹಣ ತೆಗೆದುಕೊಂಡು ಹೋಗಬೇಕೆಂದು ತೀರ್ಮಾನಿಸಿದ್ದ. ತನ್ನ ಮಾಲೀಕರ ಬಳಿ ಹಣ ಇರುವುದನ್ನು ಗೊತ್ತುಪಡಿಸಿಕೊಂಡಿದ್ದ. ಕಿಡ್ನ್ಯಾಪ್ ಕಥೆ ಕಟ್ಟಿ 2 ಲಕ್ಷ ಪಡೆದು ವಂಚಿಸುವ ಉದ್ದೇಶ ಹೊಂದಿದ್ದರು. ಇದರಂತೆ ಆರೋಪಿಗಳೆಲ್ಲರೂ ಕ್ಯಾಬ್ ಬುಕ್ ಮಾಡಿ ಮಂಡ್ಯಕ್ಕೆ ತೆರಳಿ ಅಲ್ಲಿಂದಲೇ ಆಪರೇಟ್ ಮಾಡುತ್ತಿದ್ದರು" ಎಂದು ಅವರು ತಿಳಿಸಿದರು.
ಇದನ್ನೂ ಓದಿ: Kidnap: ಚಾಮರಾಜನಗರದಲ್ಲಿ ಕಾರು ಸಮೇತ ಚಿನ್ನದ ವ್ಯಾಪಾರಿ ಕಿಡ್ನಾಪ್!