ಬೆಂಗಳೂರು: ಮೂವರು ಮಾಜಿ ಶಾಸಕರು ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ರಾಜ್ಯ ಕಾಂಗ್ರೆಸ್ ನಾಯಕರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. 2008ರಲ್ಲಿ ದೊಡ್ಡಬಳ್ಳಾಪುರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿ ಅವಧಿ ಮುಗಿದ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಶಾಸಕ ಜೆ.ನರಸಿಂಹ ಸ್ವಾಮಿ, ಕೊಳ್ಳೇಗಾಲದ ಬಿಜೆಪಿ ಮಾಜಿ ಶಾಸಕ ನಂಜುಂಡ ಸ್ವಾಮಿ, ವಿಜಯಪುರದ ಮಾಜಿ ಪಕ್ಷೇತರ ಶಾಸಕ ಮನೋಹರ್ ಐನಾಪುರ್ ಹಾಗು ಮೈಸೂರು ಮಾಜಿ ಮೇಯರ್ ಪುರುಷೋತ್ತಮ್ ಅಧಿಕೃತವಾಗಿ ಕೈ ಪಕ್ಷ ಸೇರಿದರು.
ಮನೋಹರ್ ಐನಾಪುರ್ ಅವರು 1998ರಲ್ಲಿ ನಾಗಠಾಣದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದು 2013ರಲ್ಲಿ ಪಕ್ಷೇತರ ಶಾಸಕರಾಗಿದ್ದರು. 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಜೆ.ನರಸಿಂಹಸ್ವಾಮಿ ಶಾಸಕರಾಗಿದ್ದರು. ಕೊಳ್ಳೇಗಾಲದಿಂದ 2013ರಲ್ಲಿ ನಂಜುಂಡಸ್ವಾಮಿ ಬಿಜೆಪಿ ಶಾಸಕರಾಗಿದ್ದರು.
ಇಂದು ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆಶಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹಾಗೂ ಧ್ರುವ ನಾರಾಯಣ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, "ಇಂದು ಪಕ್ಷಕ್ಕೆ ಸೇರ್ಪಡೆಯಾಗಬೇಕಿದ್ದವರ ಪಟ್ಟಿ ದೊಡ್ಡದಿತ್ತು. ಚುನಾವಣೆಗೆ 50 ದಿನ ಬಾಕಿ ಇದೆ. ಬಿಜೆಪಿಯವರು ಅರ್ಜಂಟ್ ಆಗಿ ಚುನಾವಣೆ ನಡೆಸಲು ಮುಂದಾಗಿದ್ದರು. ಕಳೆದ ತಿಂಗಳು 28 ಕಡೆಯ ಕಾರ್ಯ ನಿರ್ವಹಣೆ ದಿನ ಎಂದಿದ್ದರು. ಆದರೆ ದಿನ ಮುಂದೆ ಹೋಗುತ್ತಿದೆ. ಎಷ್ಟು ದಿನ ಸಿಗುತ್ತದೋ ಅನುಕೂಲ ಅನ್ನುವ ಭಾವನೆ ಸರ್ಕಾರದ್ದು. ಶಾರ್ಟ್ ಟರ್ಮ್ ಟೆಂಡರ್ ಆಗುತ್ತಿದೆ. ಗುತ್ತಿಗೆ ನೀಡಿಕೆ, ಹಣ ಬಿಡುಗಡೆ ಆಗುತ್ತಿದೆ. ಈಗ ಪಕ್ಷದೊಳಗಿಂದ ಮತ್ತು ಜನರಿಂದ ಬಿಜೆಪಿಗೆ ಶಾಕ್ ಎದುರಾಗುತ್ತಿದೆ. ರಾಷ್ಟ್ರೀಯ ನಾಯಕರು ಮತಬೇಟೆಗೆ ಬರುತ್ತಿದ್ದಾರೆ. ಇಲ್ಲಿನ ಜನರ ಭಾವನೆ, ಕಷ್ಟ, ಅಗತ್ಯ ಗಮನಕ್ಕೆ ಬಂದಿಲ್ಲ. ಅವರು ಯಾವ ಯಾತ್ರೆ ಬೇಕಾದರೂ ಮಾಡಲಿ. ನಾವು ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾದರೂ ಸಿದ್ಧ. ಚುನಾವಣಾ ಆಯೋಗ ಆದಷ್ಟು ಬೇಗ ಚುನಾವಣೆ ಘೋಷಿಸಬೇಕು" ಎಂದರು.
"ಇನ್ನೂ ಕೆಲವು ಹಾಲಿ ಶಾಸಕರು ಮುಂದಿನ ದಿನಗಳಲ್ಲಿ ಪಕ್ಷ ಸೇರಲಿದ್ದಾರೆ. ಅವರ ಹೆಸರು ಬಿಡುಗಡೆ ಮಾಡಲ್ಲ. ನಮ್ಮ ಸರ್ವೇ ಪ್ರಕಾರ 130 ಸ್ಥಾನ ಗೆಲ್ಲಲಿದ್ದೇವೆ. ಈ ಹಿಂದೆ 120 ಸ್ಥಾನ ಬರಬಹುದು ಎಂದು ಹೇಳಲಾಗುತ್ತಿತ್ತು. ಆದರೀಗ 130 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಬದಲಾವಣೆ ಆರಂಭವಾಗಿದೆ. ಜನರು ಬೇಸತ್ತಿದ್ದಾರೆ. ನಮ್ಮ ಯಾತ್ರೆ ಎಷ್ಟು ಯಶಸ್ವಿಯಾಗಿದೆ ಎಂಬುದಕ್ಕಿದು ಕೈಗನ್ನಡಿ" ಎಂದರು.
"ಸಿಎಂ ಬಸವರಾಜ ಬೊಮ್ಮಾಯಿ ನಮ್ಮ 200 ಯೂನಿಟ್ ಉಚಿತ ವಿದ್ಯುತ್ ಗ್ಯಾರಂಟಿ ಬೋಗಸ್ ಅಂದಿದ್ದಾರೆ. ಈ ವಿಚಾರವಾಗಿ ಯಾವುದೇ ವೇದಿಕೆಯಲ್ಲಿ ಚರ್ಚಿಸಲು ಸಿದ್ಧ. ನಾನು ಇಂಧನ ಸಚಿವನಾಗಿದ್ದೆ. ನನಗೆ ಅರಿವಿದೆ, 10 ಸಾವಿರ ಮೆಗಾವ್ಯಾಟ್‌ನಿಂದ 20 ಸಾವಿರ ಮೆಗಾವ್ಯಾಟ್‌ಗೆ ವಿದ್ಯುತ್ ಹೆಚ್ಚಳ ಮಾಡಿದ್ದೆ. ನೀವು ಜನರಿಗೆ ನೀಡಿದ 600 ಭರವಸೆ ಪೈಕಿ 50ನ್ನೂ ಈಡೇರಿಸಿಲ್ಲ. ಈಗ ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿದೆ. ನಮ್ಮ ಜನರಿಗೆ 200 ಯೂನಿಟ್ ವಿದ್ಯುತ್ ನೀಡಲಾಗದಿದ್ದರೆ ಜನರ ಮುಂದೆ ಕೂರಲ್ಲ. 200 ಯೂನಿಟ್ ಉಚಿತ, 2000 ರೂ ಖಚಿತ, 10 ಕೆ.ಜಿ. ಅಕ್ಕಿ ನೀಡುವುದು ನಿಶ್ಚಿತ" ಎಂದರು.
ಇದನ್ನೂ ಓದಿ: ಸಚಿವ ನಾರಾಯಣ ಗೌಡ ಬಿಜೆಪಿ ಬಿಟ್ರೂ ಬಿಡಬಹುದು: ಸಚಿವ ಬಿ.ಸಿ.ಪಾಟೀಲ್