ಬೆಂಗಳೂರು: ರಾಜ್ಯದಲ್ಲಿ ಹಲವು ವರ್ಷಗಳ ನಂತರ ಮಳೆ ಕೊರತೆಯಿಂದ ಭೀಕರ ಬರಗಾಲ ಎದುರಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಸರಿಯಾಗಿ ಮಳೆಯಾಗದ ಕಾರಣ ಸರ್ಕಾರ ಈ ಮೊದಲು 216 ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿತ್ತು. ನಂತರ 7 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈಗಾಗಲೇ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈಗ ಮತ್ತೂ 7 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಬರಕ್ಕೆ ತುತ್ತಾದ ತಾಲೂಕುಗಳ ಸಂಖ್ಯೆ ಬರೋಬ್ಬರಿ 223ಕ್ಕೆ ಏರಿಕೆಯಾಗಿದೆ.
ಬರದ ಹಿನ್ನೆಲೆಯಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಒಟ್ಟು 39,74,741.34 ಹೆಕ್ಟೇರ್‌ನಷ್ಟು ಫಸಲು ನಷ್ಟವಾಗಿದೆ ಎಂಬ ಬೆಳೆ ನಷ್ಟದ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ. ಭತ್ತ, ರಾಗಿ, ಬೇಳೆಕಾಳು, ಕಡಲೆ ಬೀಜ, ಹತ್ತಿ, ಕಬ್ಬು, ಹೊಗೆಸೊಪ್ಪು ಸೇರಿದಂತೆ ವಿವಿಧ ಬೆಳೆಗಳು ನಷ್ಟವಾಗಿದ್ದು, ಇದಕ್ಕೆ ಮಳೆ ಕೊರತೆಯೇ ಕಾರಣ. ಈ ವರ್ಷ ಮುಂಗಾರು ಕೈಕೊಟ್ಟಿದೆ. ಅಲ್ಲದೆ, ಹಿಂಗಾರು ಮಳೆ ಕೂಡ ವಾಡಿಕೆಗಿಂತ ಕಡಿಮೆ ಆಗಲಿದೆ. ರಾಜ್ಯದಲ್ಲಿ ಶೇ.28ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಶೇ. 73ರಷ್ಟು ಮಳೆ ಕೊರತೆ ಆಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಈಗ ಬೆಳೆ ಇಳುವರಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ಮುಂಗಾರು ಹಂಗಾಮಿನಲ್ಲಿ ನಿಗದಿತ ಗುರಿಯ ಶೇ. 89ರಷ್ಟು ಬಿತ್ತನೆಯಾಗಿದ್ದರೂ ಇಳುವರಿ ಕೈಗೆ ಸಿಗುವುದು ಖಚಿತವಾಗಿಲ್ಲ. ಇನ್ನು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲು ರೈತರು ಹಿಂದೇಟು ಹಾಕಿದ್ದಾರೆ. ಇದರ ಪರಿಣಾಮವಾಗಿ ಆಹಾರ ಉತ್ಪಾದನೆ ಕುಸಿತ ನಿಶ್ಚಿತವಾಗಿದೆ. ರಾಜ್ಯದಲ್ಲಿ ಒಟ್ಟು ಶೇ. 26ರಷ್ಟು ಮಳೆ ಕೊರತೆ ಆಗಿದೆ. 82.35 ಲಕ್ಷ ಹೆಕ್ಟೇರ್ ಬದಲು 73.26 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದ್ದು, ಒಟ್ಟು 1.48 ಕೋಟಿ ಟನ್ ಆಹಾರ ಧಾನ್ಯ ಹಾಗೂ 13.84 ಲಕ್ಷ ಟನ್ ಎಣ್ಣೆಕಾಳುಗಳ ಉತ್ಪಾದನೆ ಗುರಿ ಇತ್ತು. ಆದರೆ ಸುಮಾರು 45 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಆಗಿದೆ.
33 ಸಾವಿರ ಕೋಟಿ ರೂಪಾಯಿ ನಷ್ಟ: ಇನ್ನು ಬರದಿಂದ ಸುಮಾರು 33,770 ಕೋಟಿ ರೂ. ನಷ್ಟವಾಗಿದ್ದು, 17,901 ಕೋಟಿ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದೆ. ಹಿಂಗಾರಿನಲ್ಲಿ 25.38 ಲಕ್ಷ ಹೆಕ್ಟೇರ್ ಹಾಗೂ ಬೇಸಿಗೆ ಹಂಗಾಮಿನಲ್ಲಿ 6.54 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಇದೆ. ಆದರೆ ಹಿಂಗಾರು ಮಳೆಯೂ ಕೈಕೊಟ್ಟಿರುವುದರಿಂದ ರೈತರು ಬಿತ್ತನೆ ಮಾಡಲು ಹಿಂಜರಿಯುತ್ತಿದ್ದಾರೆ. ತಕ್ಷಣಕ್ಕೆ ಇದರ ಪರಿಣಾಮ ಗೊತ್ತಾಗದಿದ್ದರೂ ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆ ಕುಸಿಯುವ ಆತಂಕ ಎದುರಾಗಿದೆ. ಪ್ರಮುಖವಾಗಿ ಭತ್ತ, ರಾಗಿ, ತೊಗರಿ, ಜೋಳ, ಶೇಂಗಾ, ಸೂರ್ಯಕಾಂತಿ, ಸೋಯಾಬಿನ್, ಕಬ್ಬು, ಹೆಸರು ಬೇಳೆ ಬೆಳೆಗಳು ಭಾರಿ ಪ್ರಮಾಣದಲ್ಲಿ ನಾಶವಾಗಿವೆ.
ಕೆಲವು ಕಡೆ ತೊಗರಿ, ಜೋಳ, ಶೇಂಗಾ ಬೆಳೆಗಳು ಹೊಲದಲ್ಲಿ ಇದ್ದರೂ, ಇಳುವರಿ ನಿರೀಕ್ಷಿಸುವ ಮಟ್ಟಕ್ಕೆ ಇಲ್ಲ. ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ರಾಗಿ ಫಸಲು ಸರಿಯಾಗಿ ಬಂದಿಲ್ಲ. ಇದರಿಂದ ರಾಗಿ ಇಳುವರಿ ಕಡಿಮೆಯಾಗಿದೆ ಎನ್ನುತ್ತಾರೆ ರೈತ ನಂಜುಂಡಪ್ಪ.
ನೈರುತ್ಯ ಮಾರುತ ಮಳೆ: (1ನೇ ಜೂನ್ ರಿಂದ 11ನೇ ಆಗಸ್ಟ್ ರವರೆಗೆ) ಸಾಮಾನ್ಯ ಮಳೆ 562 ಮಿ.ಮಿ. ಪ್ರತಿಯಾಗಿ ವಾಸ್ತವಿಕ ಸರಾಸರಿ ಮಳೆ 470 ಮಿ.ಮಿ. ಆಗಿರುತ್ತದೆ. ಶೇಕಡಾ 16 ರಷ್ಟು ಮಳೆ ಕೊರತೆ ಇರುತ್ತದೆ. ಒಟ್ಟಾರೆ ಮಳೆ (1ನೇ ಜನವರಿ -11ನೇ ಆಗಸ್ಟ್ ವರೆಗೆ) ಸಾಮಾನ್ಯ ಮಳೆ 685 ಮಿ.ಮಿ. ಪ್ರತಿಯಾಗಿ ವಾಸ್ತವಿಕ ಸರಾಸರಿ ಮಳೆ 588 ಮಿ.ಮಿ. ಆಗಿರುತ್ತದೆ. ಶೇಕಡಾ 14 ರಷ್ಟು ಮಳೆ ಕೊರತೆ ಇದೆ.
ಕೃಷಿ ಬೆಳೆಗಳ ಬಿತ್ತನೆ ಪ್ರಗತಿ ಹಾಗೂ ಪರಿಸ್ಥಿತಿ: 2023-24ರ ಪೂರ್ವ ಮುಂಗಾರು ಹಂಗಾಮಿಗೆ 2.95 ಲಕ್ಷ ಹೆಕ್ಟೇರ್ ಗಳಲ್ಲಿ ಬಿತ್ತನೆ ಗುರಿಗೆ 2.48 ಲಕ್ಷ ಹೆಕ್ಟೇರ್ ಬಿತ್ತನೆಯಾಗಿರುತ್ತದೆ (84%). ಆಗಸ್ಟ್ 11ರ ವರದಿಗಳ ಪ್ರಕಾರ, ಮುಂಗಾರು ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 82.35 ಲಕ್ಷ ಹೆಕ್ಟೇರ್ಗೆ ಪ್ರತಿಯಾಗಿ 61.72 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ (75%).
ರಸಗೊಬ್ಬರಗಳ ಹಂಚಿಕೆ ಹಾಗೂ ಸರಬರಾಜು ವಿವರ: 2023-24ರ ಮುಂಗಾರು ಹಂಗಾಮಿಗೆ 31.18 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದ್ದು, 17.44 ಲಕ್ಷ ಮೆಟ್ರಿಕ್ ಟನ್ (ಆಗಸ್ಟ್ 11 ರ ವರೆಗೆ) ಮಾರಾಟವಾಗಿದ್ದು, 13.74 ಲಕ್ಷ ಮೆಟ್ರಿಕ್ ಟನ್ ಉಳಿಕೆ ದಾಸ್ತಾನು ಇದೆ.
ಬಿತ್ತನೆ ಬೀಜದ ವಿವರ: 2023-24ರ ಮುಂಗಾರು ಹಂಗಾಮಿಗೆ 5.55 ಲಕ್ಷ ಕ್ವಿಂಟಾಲ್ ಪ್ರಮಾಣಿತ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ಇಲ್ಲಿಯವರೆಗೆ 3.22 ಲಕ್ಷ ಕ್ವಿಂಟಾಲ್. (ಆಗಸ್ಟ್ 11 ರವರೆಗೆ ) ವಿತರಣೆ ಮಾಡಲಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ 80297 ಕ್ವಿಂಟಾಲ್ ದಾಸ್ತಾನು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ರೈತರು ಹೆಚ್ಚಾಗಿ ಬೇಳೆ ಕಾಳುಗಳಾದ ತೊಗರಿ, ಕಡಲೆ ಬೆಳೆಯುತ್ತಾರೆ. ಆದರೆ ಈ ಬಾರಿ ತೊಗರಿ ಬೆಳೆ ಮೇಲೆ ಮಳೆ ಕೊರತೆ ಪ್ರತಿಕೂಲ ಪರಿಣಾಮ ಬೀರಿದೆ. ಕಲಬುರಗಿ ಜಿಲ್ಲೆಯಲ್ಲಿಯೇ 5ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇಲ್ಲಿ ಪ್ರತೀ ವರ್ಷ 35ರಿಂದ 45 ಲಕ್ಷ ಕ್ವಿಂಟಾಲ್ ತೊಗರಿ ಉತ್ಪಾದನೆಯಾಗುತಿತ್ತು. ಈ ಬಾರಿ 7ರಿಂದ 8 ಲಕ್ಷ ಕ್ವಿಂಟಾಲ್ ಮಾತ್ರ ಸಿಗುವ ಸಾಧ್ಯತೆ ಇದೆ.
ದಾವಣಗೆರೆ, ಹಾವೇರಿ ಮತ್ತಿತರ ಕೆಲವು ಜಿಲ್ಲೆಗಳಲ್ಲಿ ಮೆಕ್ಕೆ ಜೋಳವೂ ಸರಿಯಾಗಿ ಬಂದಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎರಡನೇ ಬೆಳೆ ಬೆಳೆಯಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಹಿಂಗಾರು ಹಂಗಾಮಿನಲ್ಲಿ ಕೃಷಿ ಉತ್ಪಾದನೆ ಬಹಳಷ್ಟು ಕುಸಿಯುವ ಸಾಧ್ಯತೆ ಇದೆ. ಇನ್ನು ಮಂಡ್ಯ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಕಬ್ಬು ಬೆಳೆಯುತ್ತಾರೆ. ಆದರೆ ಈ ಬಾರಿ ಮಂಡ್ಯದಲ್ಲಿ ಕಬ್ಬಿಗಿಂತ ರಾಗಿಯನ್ನು ಹೆಚ್ಚಾಗಿ ಬೆಳೆಯಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು 80 ಸಾವಿರ ಹೆಕ್ಟೇರ್ ಕಬ್ಬಿಗೆ ಹಾನಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮೇವು ಮತ್ತು ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಬರ ಪರಿಹಾರಕ್ಕಾಗಿ ಇತ್ತೀಚೆಗೆ ರಾಜ್ಯ ವಿಪತ್ತು ನಿಧಿಯಿಂದ 324.00 ಕೋಟಿ ರೂ. ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಬರ ಪರಿಹಾರದ ಹಣ ರೈತರಿಗೆ ಸರಿಯಾಗಿ ತಲುಪಬೇಕಷ್ಟೆ.
ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ ರೈತನ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಪರಿಹಾರ: ಯತೀಂದ್ರ