ಬೆಂಗಳೂರು : ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ಬಿಜೆಪಿ ಪಕ್ಷವು ಸಂಘಟನಾ ವ್ಯಕ್ತಿಗೆ ಮಣೆ ಹಾಕಿದ್ದು, ಕಟ್ಟಾ, ಕರಡಿ ಸಂಗಣ್ಣ, ಅರವಿಂದ ಲಿಂಬಾವಳಿ ಕುಟುಂಬಕ್ಕೆ ಟಿಕೆಟ್ ನೀಡಿದೆ. ರಾಮದಾಸ್‌ಗೆ ಟಿಕೆಟ್ ಕೈ ತಪ್ಪಿದ್ದು ಮೈಸೂರು ನಗರ ಜಿಲ್ಲಾಧ್ಯಕ್ಷರಿಗೆ ಅವಕಾಶ ಮಾಡಿಕೊಡಲಾಗಿದೆ. ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ಕ್ಷೇತ್ರ ಮತ್ತು ಮಾನ್ವಿ ಕ್ಷೇತ್ರಗಳ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡಿಲ್ಲ.
ಬಾಕಿ ಉಳಿದಿದ್ದ 12 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಲ್ಲಿ ಬಹುಮುಖ್ಯವಾಗಿ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಿದೆ. ಇದರ ಜೊತೆಗೆ ಮೂವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಟಿಕೆಟ್‌ಗಾಗಿ ಸಾಕಷ್ಟು ಲಾಬಿ ನಡೆಸಿದ್ದ ಸಂಸದ ಕರಡಿ ಸಂಗಣ್ಣಗೆ ಬಿಜೆಪಿ ಟಿಕೆಟ್ ನೀಡದೆ ಅವರ ಸೊಸೆ ಮಂಜುಳಾ ಅಮರೇಶ್‌ಗೆ ಟಿಕೆಟ್ ನೀಡಲಾಗಿದೆ. ಈಗಾಗಲೇ ಕೆಲವರು ಪಕ್ಷ ತೊರೆದಿರುವುದರಿಂದ ಆಗುತ್ತಿರುವ ಡ್ಯಾಮೇಜ್ ನೋಡಿ ಎಚ್ಚೆತ್ತುಕೊಂಡ ಬಿಜೆಪಿ, ಸಂಗಣ್ಣ ಕುಟುಂಬಕ್ಕೆ ಟಿಕೆಟ್ ನೀಡುವ ಮೂಲಕ ಕೊಪ್ಪಳ ಭಾಗದಲ್ಲಿ ಬಂಡಾಯವೇಳುವುದನ್ನು ತಪ್ಪಿಸಿದೆ.
ಇನ್ನು ಮೂರು ಬಾರಿ ಶಾಸಕರಾಗಿ ಮತ್ತೊಮ್ಮೆ ಸ್ಪರ್ಧೆಗೆ ಮುಂದಾಗಿದ್ದ ಮಹದೇವಪುರ ಕ್ಷೇತ್ರದ ಹಾಲಿ ಶಾಸಕ ಅರವಿಂದ ಲಿಂಬಾವಳಿಗೆ ಬಿಜೆಪಿ ಟಿಕೆಟ್ ನೀಡದೆ ಅವರ ಪತ್ನಿಗೆ ಟಿಕೆಟ್ ನೀಡಿದೆ. ಕೆಲ ಕಾರಣಗಳಿಂದಾಗಿ ಈ ಬಾರಿ ಲಿಂಬಾವಳಿಗೆ ಟಿಕೆಟ್ ನೀಡುವುದಿಲ್ಲ ಎನ್ನಲಾಗಿತ್ತು. ಇದರಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದ ಲಿಂಬಾವಳಿ ಬಿಜೆಪಿ ನಾಯಕರ ಭೇಟಿ ಮಾಡಿ ಲಾಬಿ ನಡೆಸಿದ್ದರು. ಕಡೆಗೆ ಪಕ್ಷ ಅಳೆದು ತೂಗಿ ಲಿಂಬಾವಳಿಗೆ ಟಿಕೆಟ್ ನೀಡುವುದರಿಂದಾಗುವ ಡ್ಯಾಮೇಜ್ ಕಂಟ್ರೋಲ್‌ಗಾಗಿ ಲಿಂಬಾವಳಿ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡಿದೆ.
ಹೆಬ್ಬಾಳದಲ್ಲಿ ಕಟ್ಟಾ ಸುಬ್ರಮಣ್ಯನಾಯ್ಡು ಟಿಕೆಟ್ ಗಾಗಿ ಲಾಬಿ ನಡೆಸಿದ್ದರು. ತಮಗೆ ನೀಡಿ ಇಲ್ಲವೇ ತಮ್ಮ ಪುತ್ರನಿಗೆ ಟಿಕೆಟ್ ನೀಡಿ ಎನ್ನುವ ಬೇಡಿಕೆ ಇಟ್ಟಿದ್ದರು. ಆದರೆ ಅಪ್ಪ ಮಗ ಇಬ್ಬರಿಗೂ ಮೊದಲೆರಡು ಪಟ್ಟಿಯಲ್ಲಿ ಈ ಕ್ಷೇತ್ರಕ್ಕೆ ಹೆಸರು ಪ್ರಕಟಿಸಿರಲಿಲ್ಲ. ಆದರೆ ವೈ.ಎ.ನಾರಾಯಣಸ್ವಾಮಿಗೆ ಟಿಕೆಟ್ ನೀಡಿದಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆ ಎನ್ನುವುದನ್ನು ಮನಗಂಡು ಕಡೆಗೆ ಕಟ್ಟಾ ಸುಬ್ರಮಣ್ಯ ನಾಯ್ಡು ಬದಲು ಅವರ ಪುತ್ರ ಕಟ್ಟಾ ಜಗದೀಶ್ ಗೆ ಟಿಕೆಟ್ ನೀಡಿದೆ.
ಮತ್ತೊಂದು ಮಹತ್ವದ ಕ್ಷೇತ್ರವಾದ ಮೈಸೂರಿನ ಕೃಷ್ಣರಾಜ, ಪ್ರಧಾನಿ ಮೋದಿ ಮೈಸೂರಿಗೆ ಬಂದಿದ್ದಾಗ ವೇದಿಕೆಯ ಮೇಲೆ ಹಾಲಿ ಶಾಸಕ ಎಸ್.ಎ.ರಾಮದಾಸ್‌ರ ಬೆನ್ನಿಗೆ ಗುದ್ದಿ ಆತ್ಮೀಯವಾಗಿ ಮಾತನಾಡಿದ್ದು ಗಮನ ಸೆಳೆದಿತ್ತು. ಹಾಗಾಗಿ ಮೋದಿ ಕೃಪೆ ಇರಲಿದೆ ಎನ್ನಲಾಗಿತ್ತು. ಆದರೆ ಅವರಿಗೆ ಕೊಕ್ ನೀಡಿ ಮೈಸೂರು ನಗರ ಜಿಲ್ಲಾಧ್ಯಕ್ಷ ಶ್ರೀವತ್ಸಗೆ ಟಿಕೆಟ್ ನೀಡಲಾಗಿದೆ. ಇದರ ಜೊತೆಗೆ ಸೋಮಣ್ಣ ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರ ಕ್ಷೇತ್ರಕ್ಕೆ ಸೋಮಣ್ಣ ಸೂಚಿಸಿದಂತೆ ಉಮೇಶ್ ಶೆಟ್ಟಿಗೆ ಟಿಕೆಟ್ ನೀಡಲಾಗಿದೆ. ಹೆಸರು ಪ್ರಕಟಿಸುವ ಮೊದಲೇ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದರು ಎನ್ನುವುದು ವಿಶೇಷ.
ಎರಡು ಕ್ಷೇತ್ರ ಬಾಕಿ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. ಇದರ ಜೊತೆಗೆ ನಗರಸಭೆ ಸದಸ್ಯ ಚನ್ನಬಸಪ್ಪ(ಚನ್ನಿ) ಹೆಸರು ಮುಂಚೂಣಿಗೆ ಬಂದಿದೆ. ಇದರ ಜೊತೆಗೆ ಆಯನೂರು ಮಂಜುನಾಥ್ ಬಂಡಾಯವೂ ಇದೆ. ಡಾ.ಸರ್ಜಿ ಹೆಸರೂ ಚಾಲ್ತಿಯಲ್ಲಿದೆ. ಈಶ್ವರಪ್ಪ ಪುತ್ರನಿಗೆ ಟಿಕೆಟ್ ನಿರಾಕರಿಸಲು ಕುಟುಂಬ ರಾಜಕಾರಣ ಪ್ರಸ್ತಾಪ ಮಾಡುವುದು ಕಷ್ಟ. ಸಾಕಷ್ಟು ಮುಖಂಡರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಹಾಗಾಗಿ ಮತ್ತೊಂದು ಸುತ್ತಿನ ಚರ್ಚೆಯ ನಂತರ ಈ ಕ್ಷೇತ್ರಕ್ಕೆ ಟಿಕೆಟ್ ಪ್ರಕಟಿಸಲಾಗುತ್ತದೆ ಎನ್ನಲಾಗಿದೆ.
ಇನ್ನು ಮಾನ್ವಿ ಕ್ಷೇತ್ರಕ್ಕೂ ಟಿಕೆಟ್ ಪ್ರಕಟಿಸಿಲ್ಲ. ಗಂಗಾಧರ ನಾಯಕ್, ಮಾನಪ್ಪ ನಾಯಕ್, ಅಯ್ಯಪ್ಪ ನಾಯಕ್, ವಿಜಯ ಲಕ್ಷ್ಮಿ, ಸುಜಾತಾ ನಾಯಕ್ ಹೀಗೆ ಮಾನ್ವಿ ಕ್ಷೇತ್ರಕ್ಕೆ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದ್ದು ಅಭ್ಯರ್ಥಿ ಆಯ್ಕೆಯಲ್ಲಿ ಒಮ್ಮತದ ನಿರ್ಧಾರವಾಗಿಲ್ಲ. ಹೀಗಾಗಿ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಇಂದು ತಡ ರಾತ್ರಿ ಅಥವಾ ನಾಳೆ ಈ ಎರಡೂ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ ಎನ್ನಲಾಗಿದೆ.
3ನೇ ಪಟ್ಟಿಯಲ್ಲಿ ಟಿಕೆಟ್ ಪಡೆದ ಅಭ್ಯರ್ಥಿಗಳು:
- ಹೆಬ್ಬಾಳ – ಕಟ್ಟಾ ಜಗದೀಶ್
- ಸೇಡಂ - ಹಾಲಿ ಶಾಸಕ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್
- ಗೋವಿಂದರಾಜನಗರ - ಉಮೇಶ್ ಶೆಟ್ಟಿ
- ಹುಬ್ಬಳ್ಳಿ ಧಾರವಾಡ ಕೇಂದ್ರ - ಮಹೇಶ್ ಟೆಂಗಿನಕಾಯಿ
- ಕೃಷ್ಣರಾಜ - ಶ್ರೀವತ್ಸ, ಮೈಸೂರು ನಗರ ಬಿಜೆಪಿ ಅಧ್ಯಕ್ಷ
- ಕೊಪ್ಪಳ - ಕರಡಿ ಸಂಗಣ್ಣ ಸೊಸೆ ಮಂಜುಳಾ ಅಮರೇಶ್ ಗೆ ಟಿಕೆಟ್
- ಮಹಾದೇವಪುರ - ಮಂಜುಳಾ ಲಿಂಬಾವಳಿ, ಅರವಿಂದ ಲಿಂಬಾವಳಿ ಪತ್ನಿ
- ನಾಗಠಾಣ - ಸಂಜೀವ್ ಐಹೊಳೆ
- ರೋಣ- ಕಳಕಪ್ಪ ಬಂಡಿ
- ಹಗರಿಬೊಮ್ಮನಹಳ್ಳಿ - ಬಿ.ರಾಮಣ್ಣ
ಇದನ್ನೂ ಓದಿ : ಕೆಲವೊಬ್ಬರಿಗೆ ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅನಿಸುತ್ತಿದೆ: ಜಗದೀಶ್ ಶೆಟ್ಟರ್