ಬೆಂಗಳೂರು: ಏರಿಯಾ ಹುಡುಗರ ಜೊತೆ ಪಾರ್ಟಿ ಮಾಡಲು ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ, ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ನಟೋರಿಯಸ್ ಖದೀಮರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಕುಖ್ಯಾತ ಮನೆಗಳ್ಳ ರಫೀಕ್ ಅಲಿಯಾಸ್ ಸೇಟಿ ಹಾಗೂ ಅಯೂಬ್ ಖಾನ್ನನ್ನು ಬಂಧಿಸಿರುವ ಪೊಲೀಸರು, 31 ಲಕ್ಷ ಬೆಲೆ ಬಾಳುವ 662 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ನಾಲ್ಕು ತಿಂಗಳ ಹಿಂದೆ ಜೈಲಿಗೆ ಹೋಗಿ ಬಂದಿದ್ದ ಆರೋಪಿ ರಫೀಕ್ ಕೆ.ಆರ್.ಪುರದ ದೇವಸಂದ್ರ ನಿವಾಸಿಯಾಗಿದ್ದು, ಏರಿಯಾ ಹುಡುಗರಿಗೆ ಪಾರ್ಟಿ ಕೊಡಿಸಲು ಹಾಗೂ ಐಷಾರಾಮಿ ಜೀವನ ನಡೆಸಲು ವ್ಯವಸ್ಥಿತ ಸಂಚು ರೂಪಿಸಿ ಮನೆಗಳ್ಳತನಕ್ಕೆ ಇಳಿಯುತ್ತಿದ್ದ.
ಇದಕ್ಕೆ ಮತ್ತೋರ್ವ ಆರೋಪಿ ಅಯೂಬ್ ಕೈ ಜೋಡಿಸಿದ್ದ. ಕಳುವಿನ ವೇಳೆ ಯಾರಾದರೂ ಅಡ್ಡಿಪಡಿಸಿದರೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದರು. ರಫೀಕ್ ವಿರುದ್ಧ ಬೆಂಗಳೂರಿನ ಪುಟ್ಟೇನಹಳ್ಳಿ, ಗಿರಿನಗರ, ಕೆ.ಎಸ್.ಲೇಔಟ್ .ಕೆ.ಆರ್ ಪುರಂ. ಕೆಂಗೇರಿ, ಕಬ್ಬನ್ ಪಾರ್ಕ್, ರಾಮೂರ್ತಿನಗರ, ಕಲಾಸಿಪಾಳ್ಯ, ಜೆಸಿನಗರ, ಪೀಣ್ಯ, ಬ್ಯಾಡರಹಳ್ಳಿ, ಚಿತ್ರದುರ್ಗದ ಹಿರಿಯೂರು, ಹಾಗೂ ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ತಿಂಗಳಿಗೊಮ್ಮೆ ಮಾತ್ರ ಕಳ್ಳತನಕ್ಕೆ ಇಳಿತಿದ್ದ ರಫೀಕ್, ಪೂರ್ವಸಿದ್ದತೆ ಮಾಡಿಕೊಂಡು ಬೀಗ ಹಾಕಿದ ಮನೆಗಳನ್ನೇ ಗುರುತಿಸಿಪಡಿಸಿಕೊಂಡು ಕಳ್ಳತನಕ್ಕೆ ಇಳಿಯುತಿದ್ದ. ಕದ್ದ ಚಿನ್ನಾಭರಣವನ್ನು ಗಿರಾವಿ ಅಂಗಡಿಗಳಿಗೆ ಮಾರಿ ಅದರಿಂದ ಬಂದ ಹಣದಿಂದ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.