ಬೆಂಗಳೂರು : ಸಂಬಂಧಿಕರ ಮದುವೆಗೆ ಆಗಮಿಸಿದ್ದ ಪುಟ್ಟ ಬಾಲಕನನ್ನು ಅಪರಿಚಿತರು ಕಣ್ಣಾಮುಚ್ಚಾಲೆ ಆಡೋಣ ಬಾ ಎಂದು ಕರೆದು ಬಳಿಕ ಚಿನ್ನಾಭರಣ ದೋಚಿರುವ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇತರ ಹುಡುಗರೊಂದಿಗೆ ಬಾಲಕ ಶೌರ್ಯ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಗಮಿಸಿರುವ ಇಬ್ಬರು ಅಪರಿಚಿತರು ಕಣ್ಣಾಮುಚ್ಚಾಲೆ ಆಟ ಆಡೋಣ ಬಾ ಎಂದು ಕರೆದಿದ್ದಾರೆ. ಬಳಿಕ ಬಾಲಕನ ಗಮನ ಬೇರೆಡೆ ಸೆಳೆದು ಬಾಲಕನ ಮೈಮೇಲಿದ್ದ 79 ಗ್ರಾಂ ಚಿನ್ನಾಭರಣವನ್ನು ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ.
ಮೇ 20ರಂದು ದಾಸನಪುರ ಹೋಬಳಿಯ ಚಿಕ್ಕವೀರಯ್ಯಪಾಳ್ಯ ನಿವಾಸಿಯಾಗಿರುವ ರಾಘವೇಂದ್ರ ಎಂಬುವರು ತಮ್ಮ ಸಂಬಂಧಿಕರ ಮದುವೆ ಹಿನ್ನೆಲೆ ಮಾಗಡಿ ರಸ್ತೆಯಲ್ಲಿರುವ ಸರಸ್ವತಿ ಕನ್ವೆಷನ್ ಹಾಲ್‌ಗೆ ಹೆಂಡತಿ-ಮಕ್ಕಳ ಸಮೇತ ಬಂದಿದ್ದರು.
ಈ ವೇಳೆ ಅಪರಿಚಿತರು ರಾಘವೇಂದ್ರ ಅವರ ಮಗನ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಸದ್ಯ ಕಳವು ಮಾಡಿ ಪರಾರಿಯಾಗಿರುವ ದೃಶ್ಯ ಕಲ್ಯಾಣಮಂಟಪದಿಂದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಓದಿ : ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ವೈದ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ