ಬೆಂಗಳೂರು: ರಾಜಕಾರಣದಲ್ಲಿ ಖಾತೆ ಕ್ಯಾತೆ ಸರ್ವೇ ಸಾಮಾನ್ಯ. ಎಲ್ಲರನ್ನು ತೃಪ್ತಿಪಡಿಸಲು ದೇವರಿಂದಲೂ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ಎಲ್ಲಾ ರೀತಿಯಿಂದ ಯೋಚಿಸಿ ಖಾತೆ ಹಂಚಿಕೆ ಮಾಡಿದ್ದಾರೆ. ಗೋಪಾಲಯ್ಯರಲ್ಲಿ ಮಾತನಾಡಿದ್ದೇನೆ. ಎಂಟಿಬಿ ಜತೆನೂ ನಾನು ಮಾತನಾಡಿದ್ದೇನೆ. ಸಿಎಂ ಮೇಲೆ ಎಲ್ಲರಿಗೂ ಭರವಸೆ ಇದೆ. ಸಮಸ್ಯೆಯನ್ನು ಬೇಗ ಉಪಶಮನ ಮಾಡಲಾಗುತ್ತದೆ. ಮಾಧುಸ್ವಾಮಿಯವರೂ ರಾಜೀನಾಮೆ ನೀಡಿಲ್ಲ. ಅವರಿಗೂ ಉತ್ತಮ ಖಾತೆ ಸಿಕ್ಕಿದೆ. ಇದು ಸಾಮೂಹಿಕ ನಿರ್ಧಾರ ಆಗಿದೆ. ಇದಕ್ಕೆ ಎಲ್ಲರ ಸಹಮತ ಇದೆ. ಖಾತೆ ಬದಲಾವಣೆ ಸಿಎಂ ಪರಮಾಧಿಕಾರವಾಗಿದೆ. ಅದನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ನಾನು ಯಾವುದೇ ಖಾತೆ ಕ್ಯಾತೆ ತೆಗೆದಿಲ್ಲ. ನಾನು ಗೃಹ ಇಲಾಖೆಯನ್ನೂ ಕೇಳಿಲ್ಲ. ನಾನು ಖಾತೆ ಬದಲಾವಣೆಗೆ ಕೇಳೇ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸಮರ್ಥವಾದ ವಿರೋಧ ಪಕ್ಷ ಇಲ್ಲ. ವಿರೇಂದ್ರ ಪಾಟೀಲ್ರನ್ನು ರಾತ್ರೋರಾತ್ರಿ ಮನೆಗೆ ಕಳುಹಿಸಿದವರು ಕಾಂಗ್ರೆಸ್ನವರು. ಕಾಂಗ್ರೆಸ್ ಅಧಿಕಾರ ನಡೆಸಿದ ಸಂದರ್ಭದಲ್ಲಿ ವೀರಪ್ಪ ಮೊಯ್ಲಿ ಬಟ್ಟೆ ಹರಿದು ಹಾಕಿ ಓಡಿಸಿದ್ದರು. ಕಾಂಗ್ರೆಸ್ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂದು ಬಿಜೆಪಿ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹೇಳಲು ಯತ್ನಿಸುತ್ತಿದ್ದಾರೆ ಎಂದು ಕುಟುಕಿದರು.