ಬೆಂಗಳೂರು: ನಮ್ಮ ರಾಜ್ಯದಲ್ಲೂ ಕೊರೊನಾ ಸಂಬಂಧ ಜನರು ಕಷ್ಟನಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು, ಸರ್ಕಾರದ ನಿರ್ಧಾರಗಳಿಗೆ ಬೆಂಬಲ ಕೊಡುತ್ತೇವೆ. ಇದ್ರಲ್ಲಿ ಯಾವುದೇ ರೀತಿಯ ಸಂಕೋಚವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ದೇಶದ ಪ್ರಧಾನಿಗಳು ಮೇ 3 ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿದ್ದಾರೆ. ಕೊರೊನಾ ವೈರಸ್ ಓಡಿಸಲು ಮಹಡಿಯ ಮೇಲೆ ನಿಂತು ಶಬ್ಧ ಮಾಡುವುದು. ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಸಂದೇಶದೊಂದಿಗೆ ದೀಪ ಹಚ್ಚುವುದು. ಹೀಗೆ ಪ್ರಧಾನಿಗಳ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಮುಂದೆಯೂ ಸಹಕಾರ ನೀಡುತ್ತೇವೆ ಎಂದರು.
ರಾಜಕಾರಣ ಬೇರೆ, ಆದರೆ ದೇಶದ ವಿಚಾರದಲ್ಲಿ ನಾವು ಜೊತೆಗಿರುತ್ತೇವೆ. ಲಾಕ್ಡೌನ್ ಸಂದರ್ಭದಲ್ಲಿ ಕೆಲವು ದೋಷಗಳಿವೆ. ಅನೇಕ ಕೂಲಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಗುಳೆ ಹೋಗುತ್ತಿದ್ದಾರೆ. ಅವರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತಿಲ್ಲ. ಗುತ್ತಿಗೆದಾರರಿಗೆ ಕಾರ್ಮಿಕರ ರಕ್ಷಣೆ ಮಾಡುವಂತೆ ರಾಜ್ಯ ಸರ್ಕಾರ ಸೂಚನೆ ಕೊಟ್ಟಿದ್ದರೂ ಅನೇಕ ಕಡೆ ಇದನ್ನು ಪಾಲಿಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆರ್ಥಿಕವಾಗಿ ಕೆಲವು ಸಂಕಷ್ಟ ಇದೆ. ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮಾಡಿದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದ ಬಗ್ಗೆ ನಮ್ಮ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಇದುವರೆಗೂ ಪ್ರಧಾನಿಯಿಂದ ಯಾವುದೇ ಉತ್ತರ ಬಂದಿಲ್ಲ. ಬೇರೆ ರಾಷ್ಟ್ರಗಳಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ. ನಮ್ಮ ದೇಶದಲ್ಲಿ ಜನ ಸಂಖ್ಯೆಗೆ ಹೋಲಿಸಿದರೆ ಸಾವಿನ ಪ್ರಮಾಣ ಕಡಿಮೆ ಇದೆ. ಬಡವರು ನಾನಾ ರೀತಿ ತೊಂದರೆ ಅನುಭವಿಸುತ್ತಿದ್ದಾರೆ. ಇದು ಮೋದಿ ಅವರ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮಾರ್ಗಸೂಚಿ ಘೋಷಣೆ ನಂತರ ನಾನು ಮಾತಾಡುತ್ತೇನೆ ಎಂದ ಅವರು, ಪ್ರಧಾನಿಗೆ ಬರೆದಿರುವ ನನ್ನ ಪತ್ರಕ್ಕೆ ಇನ್ನು ಉತ್ತರ ಬಂದಿಲ್ಲ. ನಾನು ಕೇವಲ ನಮ್ಮ ರಾಜ್ಯಕ್ಕಾಗಿ ಪತ್ರ ಬರೆದಿಲ್ಲ. ಎಲ್ಲಾ ರಾಜ್ಯದ ವಿಚಾರ ಗ್ರಹಿಸಿ ಪತ್ರ ಬರೆದಿದ್ದೇನೆ. ಪತ್ರದಲ್ಲಿ ನನ್ನ ಅನುಭವದ ಅನೇಕ ಸಲಹೆ ನೀಡಿದ್ದೇನೆ. ಅದರ ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತಾರೋ ನೋಡೋಣ ಎಂದರು.