ಬೆಂಗಳೂರು : ಕೇಂದ್ರದಿಂದ ನಿನ್ನೆ ಕೊಟ್ಟ ಪರಿಹಾರ ಮೊದಲ ಕಂತು ಇರಬಹುದು. ಇನ್ನಷ್ಟು ಪರಿಹಾರ ಬರುವ ವಿಶ್ವಾಸ ಇದೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಎನ್ಡಿಆರ್ಎಫ್ ಪರಿಹಾರ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇನ್ನೂ ಹೆಚ್ಚಿನ ಪರಿಹಾರಕ್ಕೆ ಪ್ರಯತ್ನ ಪಡುತ್ತೇವೆ ಎಂದು ಭರವಸೆ ನೀಡಿದರು.
ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಕುರಿತಂತೆ ಪ್ರತಿಕ್ರಿಯಿಸಿದ ಬಿಎಸ್ವೈ, ಮಾಜಿ ಸಿಎಂ ಕುಮಾರಸ್ವಾಮಿ ನಿನ್ನೆ ಸಂಜೆ ಡಿಸಿಸಿ ಬ್ಯಾಂಕ್ ಸಂಬಂಧ ಚರ್ಚಿಸಲು ಬಂದಿದ್ದರು ಎಂದು ಸ್ಪಷ್ಟಪಡಿಸಿದರು. ಯಪಿಎಸ್ಸಿ ಮತ್ತು ಕೆಪಿಎಸ್ಸಿ ಪರೀಕ್ಷೆಗಳು ಒಟ್ಟೊಟ್ಟಿಗೆ ಬಂದಿರುವ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
ನೆಹರು ಪ್ರತಿಮೆಗೆ ಮಾಲಾರ್ಪಣೆ : ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ 131ನೇ ಜನ್ಮ ದಿನಾಚರಣೆ ಹಿನ್ನೆಲೆ ಸಿಎಂ ವಿಧಾನಸೌಧದ ಪಶ್ಚಿಮ ಭಾಗದಲ್ಲಿರುವ ನೆಹರು ಪ್ರತಿಮೆ ಬಳಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.