ಬೆಂಗಳೂರು: ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಹೀಗೆ ಹಲವು ರೀತಿಯ ಕಾಗದ ಪತ್ರಗಳನ್ನು ನಕಲಿ ಮಾಡಿರುವುದನ್ನು ನೀವೂ ಕೇಳಿರುತ್ತೀರಿ... ಆದರೆ, ಈ ಖತರ್ನಾಕ್ ಕಿಲಾಡಿಗಳು ಹೈಕೋರ್ಟ್ ಆದೇಶ ಪ್ರತಿ ಹಾಗೂ ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ವಂಚನೆ ಪ್ರಕರಣದಲ್ಲಿ ವಿಧಾನಸೌಧ ಪೊಲೀಸರು ಆರೋಪಿಗಳಾದ ಎಂ.ಜಿ.ಗೋಕುಲ್ ಹಾಗೂ ವಿಶಾಲ್ ಸಿಂಗ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ..
ಮೂಲತಃ ಉತ್ತರ ಪ್ರದೇಶದ ಮೂಲದ ಆರೋಪಿಗಳು ಹಣದಾಸೆಗಾಗಿ ಕಳ್ಳತನ ದಾರಿ ಹಿಡಿದಿದ್ದರು. ಇದಕ್ಕಾಗಿ ಬೆಂಗಳೂರಿಗೆ ಬಂದು ಸರಗಳ್ಳತನ ಮಾಡುತ್ತಿದ್ದರು. ಕುತೂಹಲಕಾರಿ ವಿಷಯವೇನೆಂದರೆ ಅಂದರೆ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ತಮ್ಮ ಕೆಲಸ ಮುಗಿಸಿಕೊಂಡು ಮತ್ತೆ ಫ್ಲೈಟ್ ಹತ್ತುವ ಮೂಲಕ ಒಂದು ರೀತಿಯಲ್ಲಿ ಹೈಫೈ ಕಳ್ಳರಾಗಿ ಕುಖ್ಯಾತಿ ಪಡೆದಿದ್ದರು.
ಬೆಂಗಳೂರಿನ ರಾಜಾಜಿನಗರ, ಚಂದ್ರಾ ಲೇಔಟ್, ಜ್ಞಾನಭಾರತಿ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಬೈಕ್ ಮೂಲಕ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದರು. ಇಬ್ಬರ ಮೇಲೂ ನಗರದ ವಿವಿಧ ಠಾಣೆಗಳಲ್ಲಿ ಬರೋಬ್ಬರಿ 21 ಪ್ರಕರಣ ದಾಖಲಾಗಿತ್ತು. ಇಷ್ಟಾದರೂ ಈ ಚಾಲಾಕಿ ಚೋರರು ಪೊಲೀಸರ ಬಲೆಗೆ ಬಿದ್ದಿರಲೇ ಇಲ್ಲ. ಸದ್ಯ ಈ ಹೈಫೈ ಕಳ್ಳರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಆದರೆ ಸಾಕ್ಷಿಗಳ ಕೊರತೆಯಿಂದ ನ್ಯಾಯಾಲಯದಲ್ಲಿ ಇವರ ಮೇಲಿದ್ದ 21 ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಯಾಗಿತ್ತು. ಪ್ರಕರಣಗಳ ಖುಲಾಸೆ ಪ್ರಶ್ನಿಸಿ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹಾಜರಾಗುವಂತೆ ಆರೋಪಿಗಳಿಗೆ ನೊಟೀಸ್ ನೀಡಿತ್ತು.
ಕೋರ್ಟಿಗೆ ಗೈರಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳ ಮೇಲೆ ಜಾಮೀನುರಹಿತ ವಾರೆಂಟ್ ಆದೇಶ ಹೊರಡಿಸಿತ್ತು. ಜಾಮೀನು ರಹಿತ ವಾರೆಂಟ್ ಆದೇಶ ಹೊರಡಿಸಿದ್ದರೂ ಕೋರ್ಟ್ಗೆ ಹಾಜರಾಗುವುದನ್ನು ತಪ್ಪಿಸಲು ಔರಂಗಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ವಿಕ್ಕಿ, ಬೆಂಗಳೂರಿನಲ್ಲೇ ಇದ್ದ ಮತ್ತೊಬ್ಬ ಆರೋಪಿ ಗೋಕುಲ್ಗೆ ಕೋರ್ಟ್ಗೆ ಹಾಜರಾಗದಂತೆ ಸೂಚಿಸಿದ್ದ.
ಹಣದಾಸೆಗೆ ಜೋತುಬಿದ್ದ ಗೋಕುಲ್, ನ್ಯಾಯಾಧೀಶರಾದ ನಟರಾಜ್ ಮಾಡಿದ್ದ ಆದೇಶ ಹಾಗೂ ಸಹಿಯನ್ನ ನಕಲು ಮಾಡಿ, ನಕಲು ಪ್ರತಿಯನ್ನು ಉತ್ತರಪ್ರದೇಶದ ಡಿಜಿಗೆ ಪೋಸ್ಟ್ ಮಾಡಿದ್ದಾನೆ. ಪೋಸ್ಟ್ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಬಾರದು, ಕೇಸ್ ಡಿಸ್ಮಿಸ್ ಆಗಿದೆ ಎಂದು ನಮೂದಿಸಿದ್ದ.
ನಕಲು ಆದೇಶ ಪ್ರತಿ ಕಂಡು ಅನುಮಾನಗೊಂಡು ಅಡ್ವೋಕೇಟ್ ಅನಿತಾ ಎಂಬುವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಇನ್ ಸ್ಪೆಕ್ಟರ್ ಬಿ.ಶಂಕರಾಚಾರಿ ನೇತೃತ್ವದ ತಂಡ ಆರೋಪಿಗಳನ್ನು ಹಿಡಿಯುವಲ್ಲಿ ಯಶ್ವಸಿಯಾಗಿದೆ.