ಬೆಂಗಳೂರು: ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ದುಸ್ಥಿತಿಯ ಕುರಿತು ವಿಧಾನಸಭೆಯಲ್ಲಿಂದು ಚರ್ಚೆ ನಡೆಯಿತು. ಪ್ರಶ್ನೋತ್ತರ ಅವಧಿ ವೇಳೆ ಬಿಜೆಪಿ ಸದಸ್ಯ ರಮೇಶ್ ಬೂಸನೂರು, ಸಿಂಧಗಿ ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿರುವ 2 ಜಲವಾಹನಗಳು ಹಳೆಯದಾಗಿವೆ. ಹೀಗಾಗಿ, ಹೊಸ ವಾಹನಗಳನ್ನು ನೀಡಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, 50 ಹೊಸ ವಾಹನಗಳನ್ನು ಖರೀದಿಸುತ್ತಿದ್ದೇವೆ. ಆಗ ಹಳೆಯ ವಾಹನಗಳನ್ನು ಬದಲಿಸಿ ಹೊಸ ವಾಹನಗಳನ್ನು ನೀಡುತ್ತೇವೆ ಎಂದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿ, ಹೊಸ ವಾಹನಗಳನ್ನು ನಮ್ಮ ಕ್ಷೇತ್ರಕ್ಕೂ ಕೊಡುತ್ತೀರೋ ಏನೋ ಎಂದು ಕೇಳಿದರು.
ಈ ಸಂದರ್ಭದಲ್ಲಿ ಗೃಹ ಸಚಿವರು, ನಿಮಗೂ ಕೊಡುತ್ತೇವೆ ಎಂದು ಹೇಳಿದರಾದರೂ, ಸ್ಪೀಕರ್ ಕಾಗೇರಿ, ನಮ್ಮ ಕ್ಷೇತ್ರದಲ್ಲೂ ಅಗ್ನಿಶಾಮಕ ವಾಹನಗಳ ಸ್ಥಿತಿ ಹೇಳುವಂತಿಲ್ಲ. ಆ ವಾಹನಗಳು ಸಾಗರ, ಕಾರವಾರ ಇಲ್ಲೆಲ್ಲಾ ಓಡಾಡುತ್ತಿದ್ದು, ಪರಿಸ್ಥಿತಿ ವಿವರಿಸಲು ಮುಂದಾದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಹಳೆಯ ವಾಹನಗಳನ್ನು ಗೃಹ ಸಚಿವರ ಬೆಂಗಾವಲಿಗೆ ನಿಯೋಜಿಸೋಣ ಎಂದು ಹಾಸ್ಯಚಟಾಕಿ ಹಾರಿಸಿದರು. ಆಗ ಸದನದಲ್ಲಿ ನಗೆ ಅಲೆ ಎದ್ದಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ನನಗೂ ಈ ಬಗ್ಗೆ ಮಾಹಿತಿ ಇದೆ. 50 ಹೊಸ ಅಗ್ನಿಶಾಮಕ ವಾಹನಗಳನ್ನು ಖರೀದಿಸುತ್ತಿದ್ದೇವೆ. ಆಗ ಹಳೆಯ ವಾಹನಗಳನ್ನು ಬದಲಿಸಿ ಹೊಸ ವಾಹನಗಳನ್ನು ನೀಡುತ್ತೇವೆ ಎಂದು ತಿಳಿಸಿದರು. ನಂತರ ಈ ಚರ್ಚೆಗೆ ತೆರೆ ಎಳೆಯಲಾಯಿತು.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಅಗ್ನಿಶಾಮಕ ಠಾಣೆಯನ್ನು ಆರಂಭಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಗೃಹ ಸಚಿವರು, ಕಾಂಗ್ರೆಸ್ ಸದಸ್ಯ ನರೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದರು. ಮಲೆಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಕಳೆದ ಐದು ವರ್ಷಗಳಲ್ಲಿ ಕೇವಲ 4 ಅಗ್ನಿ/ರಕ್ಷಣಾ ಕರೆಗಳು ಬಂದಿವೆ. ಈ ಕರೆಗಳ ಆಧಾರದ ಮೇಲೆ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಲಾಗುತ್ತದೆ. ಮುಂದೆ ಇಲ್ಲಿ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಲು ಪರಿಶೀಲನೆ ನಡೆದಿದೆ.
ಇದನ್ನೂ ಓದಿ: ಸರ್ಕಾರಿ ವಕೀಲರ ನೇಮಕಾತಿಗೆ ಮಾರ್ಗಸೂಚಿ : ಮಾಧುಸ್ವಾಮಿ ಭರವಸೆ
ಮಲೆಮಹದೇಶ್ವರಸ್ವಾಮಿ ಬೆಟ್ಟದ ಜಾತ್ರಾ ಮಹೋತ್ಸವ ಹಾಗೂ ಹಬ್ಬ ಹರಿದಿನಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ಬರುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಅಗ್ನಿ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಹತ್ತಿರದ ಹನೂರು ಅಗ್ನಿಶಾಮಕ ಠಾಣೆಯಿಂದ ಅಗ್ನಿಶಾಮಕ ಜಲ ವಾಹನಗಳನ್ನು ಕರ್ತವ್ಯಕ್ಕಾಗಿ ನಿಯೋಜಿಸಲಾಗುತ್ತದೆ ಎಂದು ಅವರು ತಿಳಿಸಿದರು.