ಬೆಂಗಳೂರು : ಕೇಂದ್ರದ ಮಾರ್ಗಸೂಚಿ ಅನ್ವಯ ಅನ್ ಲಾಕ್- 2 ಅನ್ನು ರಾಜ್ಯದಲ್ಲಿ ಅಧಿಕೃತವಾಗಿ ಜಾರಿಗೊಳಿಸಿರುವ ರಾಜ್ಯ ಸರ್ಕಾರ, ರಾಜ್ಯದ ಪರಿಸ್ಥಿತಿಗೆ ತಕ್ಕಂತೆ ಕೆಲವು ಮಾರ್ಪಾಡು ಮಾಡಿದೆ.
ಕಂಟೈನ್ಮೆಂಟ್ ವಲಯಗಳ ಲಾಕ್ ಡೌನ್ ಬಗ್ಗೆ ಜಿಲ್ಲಾಡಳಿತ ಮತ್ತು ಬಿಬಿಎಂಪಿ ಪರಿಸ್ಥಿತಿಗನುಗುಣವಾಗಿಯೇ ಕ್ರಮ ಕೈಗೊಳ್ಳಬಹುದಾಗಿದೆ. ಕಂಟೈನ್ಮೆಂಟ್ ವಲಯದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಿದೆ. ಬಿಬಿಎಂಪಿ/ಜಿಲ್ಲಾಡಳಿತವು ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸಲಿದೆ. ಕಂಟೈನ್ಮೆಂಟ್ ವಲಯದಲ್ಲಿ ತುರ್ತು ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಬರಬಾರದು. ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದಲ್ಲಿ ಮಾತ್ರ ನಾಗರಿಕರು ಹೊರಗೆ ಬರಲು ಅವಕಾಶ ನೀಡಲಾಗಿದೆ.
![ರಾಜ್ಯ ಸರ್ಕಾರ ಆದೇಶ](https://etvbharatimages.akamaized.net/etvbharat/prod-images/kn-bng-05-unlock-in-the-state-script-7208083_30062020194942_3006f_1593526782_750.jpg)
ಜುಲೈ 31 ರವರೆಗೆ ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಗಳು, ತರಬೇತಿ ಸಂಸ್ಥೆಗಳು ಸ್ಥಗಿತಗೊಳ್ಳಲಿವೆ. ಆನ್‌ಲೈನ್ ಶಿಕ್ಷಣಕ್ಕೆ ಅನುಮತಿ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ತರಬೇತಿ ಸಂಸ್ಥೆಗಳು ಜುಲೈ 15 ರಿಂದ ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ, ಲಾಕ್ ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಿದೆ.
ಮೆಟ್ರೋ ರೈಲು, ಸಿನಿಮಾ ಮಂದಿರ, ಜಿಮ್, ಸ್ವಿಮಿಂಗ್, ಸಾಮಾಜಿಕ, ರಾಜಕೀಯ ಸಮಾರಂಭಗಳಿಗೆ ಅವಕಾಶ ಇಲ್ಲ. ದೇಶೀಯ ವಿಮಾನಯಾನ, ಕೆಲವು ರೈಲುಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿರುವಂತೆ ಜುಲೈ 5 ರಿಂದ ಪ್ರತಿ ಭಾನುವಾರ ಲಾಕ್ ಡೌನ್ ಮಾಡಲಾಗುತ್ತದೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಟ್ಟುನಿಟ್ಟಾಗಿ ಕರ್ಫ್ಯೂ ಪಾಲನೆ ಮಾಡಲಾಗುತ್ತದೆ. ಕಾರ್ಖಾನೆಗಳಿಗೆ ನೈಟ್ ಕರ್ಪ್ಯೂ ವಿನಾಯಿತಿ ನೀಡಲಾಗಿದೆ. ಶಿಫ್ಟ್ ಆಧಾರದ ಮೇಲೆ ಕೆಲಸಕ್ಕೆ ಅನುಮತಿ ನೀಡಲಾಗಿದೆ.
ಈಗಾಗಲೇ ಭಾನುವಾರದಂದು ಮದುವೆಗಳು ನಿಗದಿಯಾಗಿದ್ದರೆ ಅಂತಹ ಮದುವೆ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುತ್ತದೆ. ಆದರೆ, ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಜುಲೈ 10 ರಿಂದ ಸರ್ಕಾರಿ ನೌಕರರಿಗೆ ಶನಿವಾರ ಮತ್ತು ಭಾನುವಾರದಂದು ರಜೆ ಘೋಷಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.