ಬೆಂಗಳೂರು: ಈಜು ಬಾರದ ಬಾಲಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಗರದ ಸಂಪಂಗಿ ಕೆರೆಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಹರ್ಷವರ್ಧನ್ ಎಂಬ ಬಾಲಕನನ್ನು ಮ್ಯಾನುಯಲ್, ಸೂರ್ಯ, ಚರಣ್, ಕುಳ್ಳಿ ಹಾಗೂ ಸಂದೀಪ್ ಈಜಾಡಲು ಸಂಪಗಿ ಕೆರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಎಲ್ಲರೂ ಈಜಾಡುವಾಗ, ಹರ್ಷವರ್ಧನ್ ಈಜು ಬಾರದ ಕಾರಣ ದಡದಲ್ಲಿ ನಿಂತಿದ್ದಾನೆ. ಈ ವೇಳೆ ಬಾಲಕನನ್ನು ಇತರರು ಬಲವಂತವಾಗಿ ನೀರಿಗೆಳೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆಗೊಳಗಾದ ಬಾಲಕನ ಬಲಗಣ್ಣಿಗೆ ಗಾಯವಾಗಿದ್ದು ರಕ್ತ ಹೆಪ್ಪುಗಟ್ಟಿದೆ. ನಂತರದಲ್ಲಿ ಆತನನ್ನು ನೀರಿನಲ್ಲಿ ಮುಳುಗಿಸಿ ಈಜುವಂತೆ ಅವಾಚ್ಯ ಶಬ್ದಗಳಿಂದಲೂ ನಿಂದಿಸಲಾಗಿದೆ.
ಬಾಲಕನ ಪೋಷಕರು ಈ ಕುರಿತು ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಚೇತನ್ ಸಿಂಗ್ ರಾಥೋರ್, ಬಾಲಕನಿಗೆ ಕೆರೆಯಲ್ಲಿ ಹಿಂಸೆ ಕೊಟ್ಟ ಹಿನ್ನೆಲೆಯಲ್ಲಿ ಕೊಲೆ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆರು ಜನ ಹುಡುಗರಲ್ಲಿ ಐವರು ಅಪ್ರಾಪ್ತರಾಗಿದ್ದು, ಐದು ಜನರನ್ನು ಜ್ಯೂವೆನಲ್ ಕೋರ್ಟ್ಗೆ ಹಾಜರುಪಡಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಸಂದೀಪ್ ಎಂಬಾತ ಸ್ಟೋರ್ ಕೀಪರ್ ಕೆಲಸ ಮಾಡ್ತಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು ಪೊಲೀಸರು ಶೋಧ ಮುಂದುವರೆಸಿದ್ದಾರೆ.