ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳು, ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ಗಳಿಗೆ ತಡೆ ನೀಡಬೇಕು ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ನಾಲ್ಕು ಪ್ರತ್ಯೇಕ ಎಫ್ಐಆರ್ಗಳನ್ನು ರದ್ದುಪಡಿಸುವಂತೆ ಕೋರಿ, ವಜೀರ್ ಖಾನ್ ಸೇರಿದಂತೆ ಎಲ್ಲಾ 126 ಆರೋಪಿಗಳು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಪಿ. ಭಜಂತ್ರಿ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ ಅರ್ಜಿದಾರರ ವಿರುದ್ಧ ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ. ಆದರೆ, ಪ್ರತಿಯೊಂದು ಎಫ್ಐಆರ್ಗೂ ಸಂಬಂಧಿಸಿದ ದೂರು ಪ್ರತ್ಯೇಕವಾಗಿದೆ. ಅರ್ಜಿದಾರರು ದೂರಿರುವಂತೆ ಒಂದೇ ಕೃತ್ಯಕ್ಕೆ 2 ಎಫ್ಐಆರ್ ದಾಖಲಿಸಿಲ್ಲ. ಆದ್ದರಿಂದ ಅರ್ಜಿದಾರರ ಮನವಿಯನ್ನು ತಿರಸ್ಕರಿಸಬೇಕು ಎಂದು ಕೋರಿದರು. ಸರ್ಕಾರದ ಪರ ವಕೀಲರ ಕೋರಿಕೆ ಪುರಸ್ಕರಿಸಿದ ಪೀಠ, ಎಫ್ಐಆರ್ಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿತು.
ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳು ಕಳೆದ ಮೇ 29ರಂದು ಹೈಕೋರ್ಟ್ನಿಂದ ಷರತ್ತು ಬದ್ಧ ಜಾಮೀನು ಪಡೆದಿದ್ದಾರೆ. ಇದೀಗ ಎಫ್ಐಆರ್ಗಳನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಪೊಲೀಸರು ದುರುದ್ದೇಶದಿಂದ ಒಂದೇ ಕೃತ್ಯಕ್ಕೆ 4 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಆದ್ದರಿಂದ ಎಫ್ಐಆರ್ಗಳನ್ನು ರದ್ದುಪಡಿಸಬೇಕು ಮತ್ತು ಅರ್ಜಿ ಇತ್ಯರ್ಥವಾಗುವವರೆಗೆ ಎಫ್ಐಆರ್ಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದಾರೆ.