ಬೆಂಗಳೂರು: ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋವಿಡ್ ಸೋಂಕಿತರಿಗೆ ಮನೆ ಬಾಗಿಲಿಗೇ ಓಲಾ ಕ್ಯಾಬ್‌ಗಳ ಮೂಲಕ ಆಮ್ಲಜನಕ ಸಾಂದ್ರಕ (concentrator)ಗಳನ್ನು ಒದಗಿಸುವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್ ಚಾಲನೆ ನೀಡಿದ್ದಾರೆ.
ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ವ್ಯವಸ್ಥೆ ಆರಂಭವಾಗುತ್ತಿದ್ದು, ಕ್ರಮೇಣ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಈ ಕೆಲಸದಲ್ಲಿ ಸರ್ಕಾರದ ಜೊತೆ ‘ಗಿವ್ ಇಂಡಿಯಾ’ ಹಾಗೂ ‘ಓಲಾ ಕ್ಯಾಬ್’ ಕಂಪನಿಗಳು ಕೈಜೋಡಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಇಡೀ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಲ್ಲೇಶ್ವರಂ ವಿಧಾನಸಭೆ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕೆಲಸ ಮಾಡಲಾಗಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಇಡೀ ಬೆಂಗಳೂರಿಗೆ ವಿಸ್ತರಿಸುತ್ತಿದ್ದು, ಅದಕ್ಕೆ ಓಲಾ ಸಹಕಾರ ನೀಡುತ್ತಿರುವುದು ಖುಷಿಯ ವಿಚಾರ ಎಂದರು.
ಹೋಮ್ ಐಸೋಲೇಷನ್ ಆಗಿರುವ ಸೋಂಕಿತರಲ್ಲಿ ಆಮ್ಲಜನಕದ ಸ್ಯಾಚುರೇಶನ್ ಮಟ್ಟವು ಶೇ.94ಕ್ಕಿಂತ ಕಡಿಮೆ ಇದ್ದರೆ ಅಂಥವರಿಗೆ ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗುವುದು. ಓಲಾ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಿದ 30 ನಿಮಿಷದೊಳಗೆ ಆಕ್ಸಿಜನ್ ಸಾಂದ್ರಕ ತಲುಪುತ್ತದೆ. ಸೋಂಕಿತರು 500 ರೂ. ಭದ್ರತಾ ಠೇವಣಿ ಇಟ್ಟು ಇವುಗಳನ್ನು ಪಡೆಯಬೇಕು. ಈ ಸಾಂದ್ರಕಗಳನ್ನು ವಾಪಸ್ ಪಡೆಯುವಾಗ ಈ ಮೊತ್ತವನ್ನು ಹಿಂತಿರುಗಿಸಲಾಗುವುದು. ಜೊತೆಗೆ, ಸೋಂಕಿತರಿಗೆ ಈ ಯಂತ್ರವನ್ನು ಹೇಗೆ ಬಳಸಬೇಕು ಎಂಬುದನ್ನೂ ಹೇಳಿಕೊಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಸದ್ಯಕ್ಕೆ 500 ಆಮ್ಲಜನಕ ಸಾಂದ್ರಕಗಳ ಮೂಲಕ ಈ ನೆಟ್‌ವರ್ಕ್ ಮಾಡಲಾಗಿದೆ. ಇವತ್ತು ಮಲ್ಲೇಶ್ವರಂ ಮತ್ತು ಕೋರಮಂಗಲದಲ್ಲಿ ವಿದ್ಯುಕ್ತವಾಗಿ ಆರಂಭ ಮಾಡಲಾಗಿದೆ. ಕ್ರಮೇಣ ಮತ್ತಷ್ಟು ಪ್ರಮಾಣದಲ್ಲಿ ವಿಸ್ತರಣೆ ಮಾಡಲಾಗುವುದು. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಇದರ ಜೊತೆಯಲ್ಲೇ ಟೆಲಿಕನ್ಸಲ್‌ಟೆನ್ಸಿ ಕೊಡುವ ಚಿಂತನೆಯೂ ಇದೆ. ಅಗತ್ಯಬಿದ್ದರೆ ಅಂಥ ಸೋಂಕಿತರಿಗೆ ಔಷಧೋಪಾಚಾರವನ್ನೂ ಒದಗಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.
ಸೆಕೆಂಡ್ ಡೋಸ್‌ನವರಿಗೆ ಸಮಸ್ಯೆ ಇಲ್ಲ
ಪ್ರಸ್ತುತ ದಿನಕ್ಕೆ 2.5 ಲಕ್ಷ ಡೋಸ್ ಲಸಿಕೆಯನ್ನು ಒದಗಿಸಲಾಗುತ್ತಿದೆ. ಹೀಗಾಗಿ ಎಲ್ಲಿಯೂ ಲಸಿಕೆ ಸಮಸ್ಯೆ ಇಲ್ಲ. ಮೊದಲು ಕೇವಲ 1 ಲಕ್ಷ ಡೋಸ್ ಮಾತ್ರ ನೀಡಲಾಗುತ್ತಿತ್ತು. ಸೆಕೆಂಡ್ ಡೋಸ್ ಪಡೆಯುತ್ತಿರುವವರಿಗೆ ಕೊರತೆ ಉಂಟಾಗುತ್ತಿಲ್ಲ. ಮೊದಲ ಡೋಸ್ ಪಡೆಯುತ್ತಿರುವರಿಗೆ ಮಾತ್ರ ಸಣ್ಣ ಪ್ರಮಾಣದಲ್ಲಿ ಸಮಸ್ಯೆ ಆಗುತ್ತಿದೆ. ಒಂದೇ ದಿನ ಏಕಾಎಕಿ ಹೆಚ್ಚು ಜನ ಲಸಿಕೆ ಕೇಂದ್ರಕ್ಕೆ ನುಗ್ಗಬಾರದು. ಈ ಮುನ್ನ ಮೊದಲು ಬಂದರಿಗೆ ಲಸಿಕೆ ಕೊಡಲಾಗುತ್ತಿತ್ತು. ಇನ್ಮುಂದೆ 45 ವರ್ಷ ಮೇಲ್ಪಟ್ಟವರು ಕೂಡ ಆನ್‌ಲೈನ್ ಮೂಲಕವೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಓಲಾ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ಪೋರ್‌ವಾಲ್ ಮಾತನಾಡಿ, ಇಂತಹ ಸಂಕಷ್ಟ ಸಂದರ್ಭದಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಈ ಯೋಜನೆಯನ್ನು ಬೆಂಗಳೂರು ಮಾತ್ರವಲ್ಲದೆ, ಇಡೀ ದೇಶದಲ್ಲಿ ವಿಸ್ತರಿಸಲಾಗುವುದು. 10,000 ಆಮ್ಲಜನಕ ಸಾಂದ್ರಕಗಳನ್ನು ಜನ ಬಳಸುವ ಉದ್ದೇಶ ಇದೆ ಎಂದರು.
ಗಿವ್ ಇಂಡಿಯಾದ ಸರ್ಕಾರದ ಜೊತೆಗಿನ ಪಾಲುದಾರಿಕೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ವಿನೋದ್ ಮಾತನಾಡಿ, ಸರ್ಕಾರ ಮತ್ತು ಓಲಾ ಜತೆಗೆ ಗೀವ್ ಇಂಡಿಯಾ ಸೇರಿ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ಮೊದಲ ಹಂತದಲ್ಲಿ 500 ಸಾಂದ್ರಕ ಕೊಡುತ್ತಿದ್ದು, ಅಗತ್ಯ ನೋಡಿಕೊಂಡು ಇನ್ನೂ ಹೆಚ್ವು ಸರಬರಾಜು ಮಾಡಲಾಗುವುದು ಎಂದರು.
ಗೀವ್ ಇಂಡಿಯಾ, ಓಲಾ ಜತೆ ಸಂಯೋಜನೆಯ ಕೆಲಸ ಮಾಡಿದ ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ರಾಘವೇಂದ್ರ ಬೇಲೂರು ಈ ಸಂದರ್ಭದಲ್ಲಿ ಹಾಜರಿದ್ದರು.