ಬೆಂಗಳೂರು: ಕೊರೊನಾ ಸೋಂಕಿನಿಂದ ಬಹುತೇಕ ಜನರ ಜೀವನ ಅತಂತ್ರವಾಗಿದೆ. ಸದ್ಯ ನಗರದಲ್ಲೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಬಾಡಿಗೆ ಮನೆಯಲ್ಲಿದ್ದ ನವ ದಂಪತಿ ಸದ್ಯ ಲಾಕೌಡೌನ್ ಇರುವ ಹಿನ್ನೆಲೆ ತಮ್ಮ ಬಾಡಿಗೆ ಮನೆ ಬಿಟ್ಟು ಸ್ನೇಹಿತರ ಮನೆಗೆ ಊಟಕ್ಕೆ ತೆರಳಿದ್ದರು. ಆದರೆ ರಾತ್ರಿ ಊಟ ಮುಗಿಸಿ ಮನೆಗೆ ಬಂದಾಗ ಮನೆ ಮಾಲೀಕ ಕೊರೊನಾ ಶಂಕೆ ಇದೆ, ಮನೆಯ ಒಳಗೆ ಬರಬೇಡಿ ಎಂದು ಹೊರಹಾಕಿದ್ದಾರೆ.
ಬಾಗಲಗುಂಟೆ ಬಳಿ ರಂಗ ಮತ್ತು ಪವಿತ್ರ ದಂಪತಿ ಕಳೆದ ತಿಂಗಳು ಮದುವೆಯಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡ್ತಿದ್ದ ವ್ಯಕ್ತಿ ರಂಗ ಸದ್ಯ ಲಾಕೌಡೌನ್ ಹಿನ್ನೆಲೆ ಜೀವನ ಸಾಗಿಸೋದಕ್ಕಾಗಿ ಸಾಧ್ಯವಾಗದ ಕಾರಣ ಸ್ನೇಹಿತನ ಮನೆಗೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ಮನೆಗೆ ಬಂದಾಗ, ಮಾಲೀಕ ಶಿವಣ್ಣ ಮನೆ ಗೇಟಿಗೆ ಬೀಗ ಹಾಕಿದ್ದರು.
ಈ ವೇಳೆ ದಂಪತಿ ಬಾಗಿಲು ತೆಗಿಯಿರಿ ಎಂದಾಗ ಸುತ್ತಾಡಿ ಬಂದಿದ್ದೀರಿ. ಕೊರೊನಾ ಶಂಕೆ ಇದ್ದು ಮೆಡಿಕಲ್ ರಿಪೋರ್ಟ್ ತಂದು ಮನೆಗೆ ಬನ್ನಿ ಎಂದು ಗೇಟಿಗೆ ಬೀಗ ಜಡಿದಿದ್ದಾನೆ. ಇನ್ನು ವಿಧಿ ಇಲ್ಲದೆ ದಂಪತಿ ಕಾರಿನಲ್ಲೇ ಮಲಗಿ ರಾತ್ರಿ ಕಳೆದಿದ್ದಾರೆ. ಇಂದು ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಬಂದು ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.