ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿ ಮಾಡಿದ ಬಳಿಕ ರಾಜ್ಯದಲ್ಲಿ ಸಿಲುಕಿಕೊಂಡಿರುವ ಹೊರ ರಾಜ್ಯಗಳ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸಿಕೊಡಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ವರದಿಯನ್ನು ಮೇ 18ರ ಒಳಗೆ ಸಲ್ಲಿಸುವಂತೆ ಹೈಕೋರ್ಟ್ ತಾಕೀತು ಮಾಡಿದೆ.
ವಲಸೆ ಕಾರ್ಮಿಕರ ಸಂಕಷ್ಟಗಳಿಗೆ ಸಂಬಂಧಿಸಿದಂತೆ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (ಎಐಸಿಸಿಟಿಯು) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ಹಿಂದಿನ ವಿಚಾರಣೆ ವೇಳೆ ವಲಸೆ ಕಾರ್ಮಿಕರ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ನೀತಿ ಏನೆಂದು ಕೇಳಿದ್ದರೂ ವರದಿ ಸಲ್ಲಿಸಿಲ್ಲ. ಹೀಗಾಗಿ ವಲಸೆ ಕಾರ್ಮಿಕರನ್ನು ಅವರ ಸ್ವಂತ ರಾಜ್ಯಗಳಿಗೆ ಕಳುಹಿಸಿಕೊಡಲು ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಸಮಗ್ರ ವರದಿಯನ್ನು ಮುಂದಿನ ವಿಚಾರಣೆ ಒಳಗೆ ಸಲ್ಲಿಸಬೇಕು ಎಂದು ಸರ್ಕಾರದ ಪರ ವಕೀಲರಿಗೆ ತಾಕೀತು ಮಾಡಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ ಪೀಠ, ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಲು ಯಾವೆಲ್ಲಾ ವ್ಯವಸ್ಥೆ ಮಾಡಲಾಗಿದೆ? ಈವರೆಗೂ ರಾಜ್ಯದಿಂದ ಎಷ್ಟು ವಲಸೆ ಕಾರ್ಮಿಕರು ಅವರ ಊರುಗಳಿಗೆ ಹೋಗಿದ್ದಾರೆ? ಹೋಗುವವರ ಸಂಖ್ಯೆ ಎಷ್ಟಿದೆ? ಅವರ ಪ್ರಯಾಣ ವೆಚ್ಚವನ್ನು ಯಾರು ಮತ್ತು ಹೇಗೆ ಭರಿಸುತ್ತಿದ್ದಾರೆ? ಎಂದು ಪ್ರಶ್ನಿಸಿತು. ಜತೆಗೆ ನಮ್ಮ ಮೆಟ್ರೋ ರೈಲು ಕಾರ್ಮಿಕರಿಗೆ ವೇತನ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಆ ವಿಚಾರ ಏನಾಯಿತು? ಮಾ. 24ರವರೆಗೆ ಬೊಮ್ಮನಹಳ್ಳಿ ಕ್ಯಾಂಪಿನಲ್ಲಿ ಎಷ್ಟು ಕಾರ್ಮಿಕರಿದ್ದರು? ಆ ಕ್ಯಾಂಪನಿಂದ ಈವರೆಗೆ ಎಷ್ಟು ಜನ ತೆರಳಿದ್ದಾರೆ? ಎಂಬಿತ್ಯಾದಿ ವಿಚಾರಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ತಾಕೀತು ಮಾಡಿ, ವಿಚಾರಣೆ ಮುಂದೂಡಿತ್ತು.
ವಲಸೆ ಕಾರ್ಮಿಕರ ಸ್ಥಿತಿ ಹಾಗೂ ಅವರನ್ನು ಅವರ ಸ್ವಂತ ಊರುಗಳಿಗೆ ಕಳಿಸಿಕೊಡುವ ವಿಚಾರದಲ್ಲಿ ಗೊಂದಲ ಏರ್ಪಟ್ಟಿದೆ. ಆದರೆ ಕರ್ನಾಟಕದಲ್ಲಿ ಸಿಲುಕಿಕೊಂಡು ಈಗ ಅವರ ಸ್ವಂತ ಸ್ಥಳಗಳಿಗೆ ತೆರಳಲು ಬಯಸುವ ಹೊರ ರಾಜ್ಯದ ಕಾರ್ಮಿಕರ ಸ್ಥಳಾಂತರಕ್ಕೆ ಕಾಳಜಿ ಹಾಗೂ ಕಿರುಕುಳವಾಗದಂತೆ ಎಚ್ಚರಿಕೆ ವಹಿಸಬೇಕು.
ಸಂವಿಧಾನದಡಿ ದೊರೆತಿರುವ ಮುಕ್ತ ಸಂಚಾರ ಹಾಗೂ ಕಾನೂನಿನ ಸಮಾನ ರಕ್ಷಣೆಯ ಹಕ್ಕುಗಳಿಂದ ಯಾವೊಬ್ಬ ವಲಸೆ ಕಾರ್ಮಿಕನೂ ವಂಚಿತರಾಗದಿರುವುದನ್ನು ಸರ್ಕಾರ ಖಾತರಿಪಡಿಸಬೇಕು. ವಿಪತ್ತು ಪರಿಸ್ಥಿತಿಯಲ್ಲಿ ಕಾರ್ಮಿಕರ ಸಾಂವಿಧಾನಿಕ ಹಕ್ಕುಗಳು ಮತ್ತು ಘನತೆ ಕಾಪಾಡುವ ಸಂಬಂಧ ರಾಜ್ಯ ಸರ್ಕಾರ ಒಂದು ಸ್ಪಷ್ಟ ನೀತಿ ರಚಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ಈ ಹಿಂದೆ ನಿರ್ದೇಶನ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.