ಬೆಂಗಳೂರು: ಕಳೆದ ವರ್ಷ ಮೈಸೂರಿನಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ‘ಕಾಶ್ಮೀರ ಮುಕ್ತ’ ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸದಂತೆ ನಿರ್ಣಯ ಕೈಗೊಂಡ ಮೈಸೂರು ನಗರ ವಕೀಲರ ವಿವಿಧೋದ್ದೇಶ ಸಹಕಾರ ಸಂಘದ ವಿರುದ್ಧ ಕ್ರಮ ಜರುಗಿಸದ ಬಗ್ಗೆ ವಿವರಣೆ ನೀಡುವಂತೆ ಮೈಸೂರು ವಕೀಲರ ಸಂಘ ಹಾಗೂ ರಾಜ್ಯ ವಕೀಲರ ಪರಿಷತ್ತಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಸಂಘದ ನಿರ್ಣಯದ ವಿರುದ್ಧ ವಕೀಲ ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಮಾ.9ಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ಮೈಸೂರು ವಕೀಲರ ಸಂಘದ ಪರ ವಕೀಲರು ಪೀಠಕ್ಕೆ ವಿವರಣೆ ನೀಡಿ ನಮ್ಮ ಸಂಘ ಆ ರೀತಿಯ ಯಾವುದೇ ನಿರ್ಣಯ ಕೈಗೊಂಡಿಲ್ಲ. ಬದಲಿಗೆ ಸಂಘದ ಸದಸ್ಯ ವಕೀಲರೇ ಆರೋಪಿ ಪರ ವಕಾಲತ್ತು ಹಾಕಿ ಜಾಮೀನು ಕೊಡಿಸಿದ್ದಾರೆ. ಮೈಸೂರು ನಗರ ವಕೀಲರ ವಿವಿಧೋದ್ದೇಶ ಸಹಕಾರ ಸಂಘವು ಈ ನಿರ್ಣಯ ಕೈಗೊಂಡಿದೆ. ಅದಕ್ಕೂ ವಕೀಲರ ಸಂಘಕ್ಕೂ ಸಂಬಂಧವಿಲ್ಲ ಎಂದರು.
ಓದಿ: ವಿದ್ಯಾರ್ಥಿನಿ ಮೇಲೆ ರೇಪ್: ಪ್ರಾಂಶುಪಾಲನಿಗೆ ಮರಣದಂಡನೆ ವಿಧಿಸಿದ ಕೋರ್ಟ್!
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವಿವಿಧೋದ್ದೇಶ ಸಹಕಾರ ಸಂಘದ ಕಚೇರಿ ಇರುವುದು ಮೈಸೂರು ವಕೀಲರ ಸಂಘದ ಆವರಣದಲ್ಲಿಯೇ. ಹಾಗಿದ್ದೂ, ಕಾನೂನು ಬಾಹಿರವಾಗಿ ಸಹಕಾರ ಸಂಘ ಈ ರೀತಿಯ ನಿರ್ಣಯ ಕೈಗೊಂಡಿದೆ. ಆದರೆ, ಅದರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ವಕೀಲರು ಈ ರೀತಿಯ ನಿರ್ಣಯಗಳನ್ನು ಕೈಗೊಳ್ಳುತ್ತಿರುವಾಗ ರಾಜ್ಯ ವಕೀಲರ ಪರಿಷತ್ ಕ್ರಮ ಕೈಗೊಳ್ಳಬೇಕು ಹೊರತು ಮೂಕ ಪ್ರೇಕ್ಷಕ ಆಗಬಾರದು. ಆದ್ದರಿಂದ ಸಹಕಾರ ಸಂಘದ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ಮೈಸೂರು ವಕೀಲರ ಸಂಘ ಮತ್ತು ರಾಜ್ಯ ವಕೀಲರ ಪರಿಷತ್ತು ವಿವರಣೆ ನೀಡಬೇಕು ಎಂದು ಸೂಚಿಸಿತು.
ಅರ್ಜಿದಾರರ ಕೋರಿಕೆ : ಮೈಸೂರು ವಿವಿ ಆವರಣದಲ್ಲಿ 2020ರ ಜ.8ರಂದು ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ‘ಕಾಶ್ಮೀರ ಮುಕ್ತ’ ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ವಿದ್ಯಾರ್ಥಿನಿ ನಳಿನಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಸದ್ಯ ಬಂಧನದಲ್ಲಿರುವ ನಳಿನಿ ಪರ ಯಾರೊಬ್ಬ ವಕೀಲರೂ ವಕಾಲತ್ತು ವಹಿಸಬಾರದೆಂದು ಮೈಸೂರು ಜಿಲ್ಲಾ ವಕೀಲರ ಸಂಘ ಜ. 16ರಂದು ನಿರ್ಣಯ ಕೈಗೊಂಡಿದೆ. ಇಂತಹ ನಿರ್ಣಯ ಕೈಗೊಂಡಿರುವುದು ಕಾನೂನು ಬಾಹಿರ ನಡೆಯಾಗಿದ್ದು, ಸಂಘದ ವಿರುದ್ಧ ಕ್ರಮ ಜರುಗಿಸಲು ರಾಜ್ಯ ವಕೀಲರ ಪರಿಷತ್‌ಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.