ಬೆಂಗಳೂರು : ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ವ್ಯಾಪ್ತಿಯೊಳಗೆ ನಿರ್ಮಿಸಿರುವ 40 ಅಡಿ ಅಗಲದ ಏರಿ ತೆರವುಗೊಳಿಸುವ ಮತ್ತು ಕೆರೆಯೊಳಗಿನ ಹೂಳು ತೆಗೆಯುವ ಕಾಮಗಾರಿಯನ್ನು ಯಾವಾಗ ಪೂರ್ಣಗೊಳಿಸಲಾಗುತ್ತದೆ ಎಂಬ ವಿವರಗಳನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕೆರೆಯೊಳಗೆ ಏರಿ ನಿರ್ಮಿಸಿರುವ ಬಿಡಿಎ ಕ್ರಮ ಪ್ರಶ್ನಿಸಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಬಿಡಿಎ ಪರ ವಕೀಲರನ್ನ, ಬೆಳ್ಳಂದೂರು ಹಾಗೂ ವರ್ತೂರು ಕೆರೆಯಯಲ್ಲಿನ ಹೂಳು ತೆಗೆಯುವ ಹಾಗೂ ಏರಿಯನ್ನು ತೆರವುಗೊಳಿಸುವ ಕಾಮಗಾರಿಯನ್ನು ಯಾವಾಗ ಪೂರ್ಣಗೊಳಿಸಲಾಗುತ್ತದೆ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಬಿಡಿಎ ಪರ ವಕೀಲರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರೊನಾ ನಿಯಂತ್ರಣ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ಮಾನ್ಸೂನ್ ಆರಂಭವಾಗಿದ್ದು, ಮಳೆಯಿಂದಾಗಿ ಹೂಳು ತೆಗೆಯಲು ಹಾಗೂ ಏರಿ ತೆರವುಗೊಳಿಸಲು ಕನಿಷ್ಟ ಒಂದು ವರ್ಷ ಸಮಯ ಬೇಕಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅಂದಾಜು ಲೆಕ್ಕದಲ್ಲಿ ಮಾತನಾಡಬೇಡಿ. ನಿರ್ದಿಷ್ಟವಾಗಿ ಯಾವಾಗ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂಬುವುದನ್ನು ಸ್ಪಷ್ಟಪಡಿಸಿ. ಈ ಕುರಿತು ಆಗಸ್ಟ್ 14ರೊಳಗೆ ಪ್ರಮಾಣಪತ್ರ ಸಲ್ಲಿಸಿ ಎಂದು ತಾಕೀತು ಮಾಡಿ ವಿಚಾರಣೆ ಮುಂದೂಡಿತು.