ಬೆಂಗಳೂರು : ಕೊರೊನಾ ಕಾಲದಲ್ಲೂ ನಗರವನ್ನು ಸ್ವಚ್ಛವಾಗಿಡಲು ನಿರಂತರವಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸಂಬಳವನ್ನು ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಳ್ಳಬಾರದು ಎಂದಿರುವ ಹೈಕೋರ್ಟ್, ಕೂಡಲೇ ಬಾಕಿ ಇರುವ ಸಂಬಳವನ್ನು ನೀಡುವಂತೆ ಬಿಬಿಎಂಪಿಗೆ ತಾಕೀತು ಮಾಡಿದೆ.
ಕೊರೊನಾ ಸಂಬಂಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ಕ್ಲಿಫ್ಟನ್ ಡಿ. ರೊಜಾರಿಯೋ ವಾದಿಸಿ, ಪೌರ ಕಾರ್ಮಿಕರ ಸಂಕಷ್ಟಗಳನ್ನು ವಿವರಿಸಿದರು. ಶಿವಾಜಿ ನಗರ ಸೇರಿದಂತೆ ಕೆಲ ವಾರ್ಡ್ಗಳ ಪೌರ ಕಾರ್ಮಿಕರ ಹಾಗೂ ಗುತ್ತಿಗೆ ಕಾರ್ಮಿಕರ ಸಂಬಳವನ್ನು ಎರಡು ತಿಂಗಳಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಉಳ್ಳವರೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇನ್ನು ಪೌರ ಕಾರ್ಮಿಕರು ಹೇಗೆ ಜೀವನ ನಿರ್ವಹಣೆ ಮಾಡಲು ಸಾಧ್ಯ. ಹೀಗಾಗಿ ಕೂಡಲೇ ಬಾಕಿ ಸಂಬಳ ನೀಡುವಂತೆ ಪಾಲಿಕೆಗೆ ನಿರ್ದೇಶಿಸಬೇಕು ಎಂದು ಕೋರಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪೌರ ಕಾರ್ಮಿಕರಿಗೆ ಪಿಪಿಇ ಕಿಟ್ ನೀಡಿರುವುದಾಗಿ ಪಾಲಿಕೆ ಹೇಳುತ್ತಿದ್ದರೂ ಎಲ್ಲರಿಗೂ ಕಿಟ್ ಸಿಕ್ಕಿಲ್ಲ. ಹೀಗಾಗಿ ಎಲ್ಲರಿಗೂ ಪಿಪಿಇ ಕಿಟ್ ಸಿಗುವಂತೆ ಮತ್ತು ಈ ಸೌಲಭ್ಯಗಳು ರಾಜ್ಯದ ಎಲ್ಲ ಪೌರ ಕಾರ್ಮಿಕರಿಗೂ ಸಿಗುವಂತೆ ನಿರ್ದೇಶಿಸಬೇಕು. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಇರುವ ಪೌರ ಕಾರ್ಮಿಕರಿಗೆ ಕೋವಿಡ್-19 ಪರೀಕ್ಷೆ ನಡೆಸುವಂತೆ, ಬಿಬಿಎಂಪಿ ಪೌರ ಕಾರ್ಮಿಕರಿಗೆ ಸಿಗುತ್ತಿರುವ ಮತ್ತು ಸಿಗಲಿರುವ ಎಲ್ಲ ಸೌಲಭ್ಯಗಳು ರಾಜ್ಯದೆಲ್ಲೆಡೆ ಇರುವ ಪೌರ ಕಾರ್ಮಿಕರಿಗೆ ಸಿಗುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು.
ವಾದ ಪುರಸ್ಕರಿಸಿದ ಪೀಠ, ಪಾಲಿಕೆ ಕೂಡಲೇ ಬಾಕಿ ಉಳಿಸಿಕೊಂಡಿರುವ ಪೌರ ಕಾರ್ಮಿಕರ ಸಂಬಳವನ್ನು ಮುಂದಿನ ಆಗಸ್ಟ್ 23ರೊಳಗೆ ನೀಡಬೇಕು. ಕೋವಿಡ್-19 ಪರೀಕ್ಷೆ ನಡೆಸಬೇಕು. ಜೈವಿಕ ತ್ಯಾಜ್ಯ ನಿರ್ವಹಣೆ ಮಾಡುವ ಪೌರ ಕಾರ್ಮಿಕರಿಗೆ ಕಡ್ಡಾಯವಾಗಿ ಪಿಪಿಇ ಕಿಟ್ ಒದಗಿಸಬೇಕು. ಹಾಗೆಯೇ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಲಭ್ಯವಿರುವ ವಿಮೆಯನ್ನು ಪಾಲಿಕೆ ಅಧಿಕಾರಿಗಳು ಕಡ್ಡಾಯವಾಗಿ ತಲುಪಿಸಬೇಕು ಎಂದು ಬಿಬಿಎಂಪಿಗೆ ಆದೇಶಿಸಿತು.
ಹಾಗೆಯೇ, ರಾಜ್ಯ ಸರ್ಕಾರ ಬಿಬಿಎಂಪಿ ಪೌರ ಕಾರ್ಮಿಕರಿಗೆ ಒದಗಿಸುವ ಸೌಲಭ್ಯಗಳನ್ನು ರಾಜ್ಯದ ಇತರೆ ಪೌರ ಕಾರ್ಮಿಕರಿಗೆ ನೀಡಲು ಸಾಧ್ಯವಿದೆಯೇ ಎಂಬುದರ ಬಗ್ಗೆ ವಿವರಣೆ ನೀಡಬೇಕು ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.