ಬೆಂಗಳೂರು : ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿಗೆ ಮಾನವೀಯತೆ ನೆಲೆಗಟ್ಟಿನಲ್ಲಿ ಆತನ ಮಗಳ ಮದುವೆಗೆ ಹೋಗಲು ಪೆರೋಲ್ ನೀಡಿರುವ ಹೈಕೋರ್ಟ್, ಸಂತನಿಗೆ ಚರಿತ್ರೆ ಇರುತ್ತದೆ. ಅಂತೆಯೇ ಪಾಪಿಗೂ ಭವಿಷ್ಯವಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿವಾಸಿಯಾಗಿದ್ದ ಹಾಗೂ ತ್ರಿವಳಿ ಕೊಲೆ ಪ್ರಕರಣದಲ್ಲಿ ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಜಾಬಂಧಿ, ಮಗಳ ಮದುವೆಗೆ ಹೋಗಲು ಅನುಮತಿ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೀಠ ತನ್ನ ಆದೇಶದಲ್ಲಿ ಅಪರಾಧಿಯು ನಾಗರಿಕ ಸಮಾಜದ ಸಂಪರ್ಕದಲ್ಲಿ ಇರಬೇಕು. ಜೈಲಿನಿಂದ ಬಿಡುಗಡೆ ಆದಾಗ ಆತನನ್ನು ಸಮಾಜ ಅಪರಿಚಿತನಂತೆ ಕಾಣಬಾರದು. ಆತ ಜೈಲಿನಿಂದ ಬಿಡುಗಡೆಯಾದಾಗ ಸಮಾಜಕ್ಕೆ ಅಪರಿಚಿತನಾಗಿರಬಾರದು.
ಇನ್ನು ಕೈದಿ ಎಲ್ಲರಂತೆಯೇ ತನ್ನ ಮಗಳ ಮದುವೆಯನ್ನು ನೋಡಲು ಬಯಸಿದ್ದಾನೆ. ಪ್ರತಿ ಸಂತನಿಗೂ ಒಂದು ಚರಿತ್ರೆ ಇರುವಂತೆ ಪ್ರತಿ ಪಾಪಿಗೂ ಒಂದು ಭವಿಷ್ಯ ಇರುತ್ತದೆ ಎಂಬುದನ್ನು ನಾವು ಮರೆಯಬಾರದು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಸಜಾಬಂಧಿಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆಯುತ್ತಿರುವ ಆತನ ಮಗಳ ಮದುವೆಗೆ ಹಾಜರಾಗಲು 15 ದಿನಗಳ ಪೆರೋಲ್ ನೀಡಿದೆ.
ಇದೇ ವೇಳೆ ಕೊಲೆ ಪ್ರಕರಣದ ಆಪರಾಧಿಯು ಪೆರೋಲ್ ಅನ್ನು ಹಕ್ಕಿನಂತೆ ಕೇಳಲಾಗದು ಎಂಬ ಸರ್ಕಾರಿ ವಕೀಲರ ವಾದವನ್ನು ತಿರಸ್ಕರಿಸಿರುವ ಪೀಠ, ಪೆರೋಲ್ ಮೇಲೆ ಮಗಳ ಮದುವೆಗೆ ತೆರಳುತ್ತಿರುವ ವ್ಯಕ್ತಿ ಯಾವುದೇ ಅಪರಾಧದಲ್ಲಿ ಭಾಗಿಯಾಗದಂತೆ ಹಾಗೂ ಅವಧಿ ಬಳಿಕ ತಪ್ಪದೇ ಜೈಲಿಗೆ ವಾಪಸ್ಸಾಗುವಂತೆ ಷರತ್ತು ವಿಧಿಸಿದೆ. ಈ ಕುರಿತು ಮೇಲ್ವಿಚಾರಣೆ ಮಾಡುವಂತೆ ಜೈಲಧಿಕಾರಿಗಳಿಗೂ ಸೂಚಿಸಿದೆ.
ಹೊಸಕೋಟೆಯ ಗಂಗಾಳು ಗ್ರಾಮದ ವ್ಯಕ್ತಿ ತ್ರಿವಳಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದು, 1999ರ ಮಾರ್ಚ್ 2ರಿಂದ ಸಜಾ ಬಂಧಿಯಾಗಿದ್ದಾನೆ. ಬೆಳಗಾವಿಯ ಜೈಲಿನಲ್ಲಿರುವ ಈತ ನವೆಂಬರ್ 7 ಮತ್ತು 8ರಂದು ನಡೆಯಲಿರುವ ಮಗಳ ಮದುವೆಗೆ ಹಾಜಾರಾಗಲು ಅನುಮತಿ ಕೋರಿ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದ. ಆದರೆ, ಜೈಲು ಅಧಿಕಾರಿಗಳು ಈತನ ಮನವಿ ಪರಿಗಣಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರಾಗೃಹ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.