ಬೆಂಗಳೂರು: ರಾಜ್ಯ ಸರ್ಕಾರ ಸ್ವತಂತ್ರವಾದ ಮತ್ತು ಗ್ರಿಡ್-ಸಂಪರ್ಕ ಹೊಂದಿದ ಸೌರಶಕ್ತಿ ಚಾಲಿತ ಕೃಷಿ ಪಂಪ್ ಸೆಟ್ಗಳನ್ನು ಉತ್ತೇಜಿಸುವ ನೂತನ ನೀತಿಯನ್ನು ರೂಪಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.
ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಇಂದು ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, ಜಪಾನ್ ದೇಶದ ನೆರವಿನೊಂದಿಗೆ ಕಾವೇರಿ ನೀರು ಸರಬರಾಜು ಯೋಜನೆ ಐದನೇ ಹಂತದ ಯೋಜನೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಈ ಯೋಜನೆ ಕಾರ್ಯಗತಗೊಂಡ ಬಳಿಕ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 775 ಎಂಎಲ್ಡಿ ನೀರು ದೊರೆಯಲಿದೆ ಎಂದು ವಿವರಿಸಿದರು.
ಬೆಂಗಳೂರು ನಗರಕ್ಕೆ ಪ್ರತ್ಯೇಕವಾದ ಭಯೋತ್ಪಾದಕ ನಿಗ್ರಹ ಘಟಕ ಸ್ಥಾಪಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ನೆರವು ನೀಡುವುದಕ್ಕಾಗಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಈ ಘಟಕ ಆರಂಭಗೊಂಡಿದೆ ಎಂದು ತಿಳಿಸಿದರು. ಬೆಂಗಳೂರು ನಗರ ಪೊಲೀಸರು ನಾಗರೀಕ ಸ್ನೇಹಿ ಭಾಗವಾಗಿ ಪಾಸ್ ಪೋರ್ಟ್ ಪರಿಶೀಲನೆಗಾಗಿ ಮೊಬೈಲ್ ಅಪ್ಲಿಕೇಷನ್ ಬಳಸುತ್ತಿದ್ದು, ಇದನ್ನು ತ್ವರಿತಗೊಳಿಸಲು ರಾಜ್ಯದ 12 ಪೊಲೀಸ್ ಠಾಣೆಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು. ಹೆಚ್ಚುತ್ತಿರುವ ಸೈಬರ್ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧಗಳ ಸೂಕ್ತ ತನಿಖೆ ನಡೆಸಲು ಬೆಂಗಳೂರಿನಲ್ಲಿ 8 ಕಡೆ ಸೈಬರ್ ಕ್ರೈಂ ಆರ್ಥಿಕ ಮತ್ತು ಮಾದಕ ದ್ರವ್ಯ ಠಾಣೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಪೊಲೀಸ್ ನೇಮಕಾತಿಯಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗೆ ಶೇ.25 ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ. ಅಗ್ನಿ ಅನಾಹುತ, ಪ್ರವಾಹ ಹಾಗೂ ಇತರ ಅವಘಡಗಳಿಂದ ಆಗುವ ಹಾನಿಯನ್ನು ತಡೆಯಲು ಅಗ್ನಿಶಾಮಕ ಪಡೆ ದಣಿವರಿಯದ ಕಾರ್ಯವನ್ನು ಶ್ಲಾಘಿಸಿದ ರಾಜ್ಯಪಾಲರು, 60 ಸಾವಿರಕ್ಕೂ ಹೆಚ್ಚಿನ ಅವಘಡಗಳನ್ನು ತಪ್ಪಿಸಿ ಸಾವಿರಾರು ಜನರ ಜೀವ ಹಾನಿಯನ್ನು ಸಂರಕ್ಷಿಸಲಾಗಿದೆ ಎಂದು ರಾಜ್ಯಪಾಲರು ಸಮರ್ಥನೆ ಮಾಡಿಕೊಂಡರು.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ರಸ್ತೆಜಾಲದ ಕೊಡುಗೆ ಅಗಾಧವಾದುದ್ದು. ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮ ನಾಲ್ಕನೇ ಹಂತದ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ 10 ಸಾವಿರ ಕಿ.ಮೀ. ಹೆದ್ದಾರಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಆ ಭಾಗದ ಜನರ ಆಕಾಂಕ್ಷೆ ಅನುಗುಣವಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಎಂದು ಮರುನಾಮಕರಣ ಮಾಡಲಾಗಿದೆ. ಈ ಸಾಲಿನಲ್ಲಿ 1,500 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ 936 ಕೋಟಿ ರೂ.ಗಳನ್ನು ಭರಿಸಲಾಗಿದೆ. 1 ಸಾವಿರ ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.
ರಾಜ್ಯದ ಹತ್ತು ಹಲವು ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ವಿಚಾರ, ವಿಮರ್ಶೆ ಮತ್ತು ಚರ್ಚೆಗಳು ಗುಣಾತ್ಮಕತೆಯನ್ನು ನಿರ್ವಹಿಸುವಲ್ಲಿ ಎಲ್ಲ ಸದಸ್ಯರು ಸಹಕಾರ ನೀಡಬೇಕೆಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. 20 ಪುಟಗಳ 67 ಕಿರು ಸಂದೇಶವನ್ನು ಅರ್ಧ ಗಂಟೆಗಳ ಕಾಲ ಓದಿದ ರಾಜ್ಯಪಾಲರು ಹಲವು ಸಲಹೆ, ಸೂಚನೆಗಳನ್ನು ಸದಸ್ಯರಿಗೆ ನೀಡಿದರು.
ಜೆಡಿಎಸ್ ಶಾಸಕ ಡಾ. ಅನ್ನದಾನಿ, ರಾಜ್ಯಪಾಲರ ಭಾಷಣ ಸಂದರ್ಭದಲ್ಲಿ ಪ್ರತಿ ದೊರೆಯದ ಸಂದರ್ಭದಲ್ಲಿ ಯಾವುದೇ ಭಾಷೆಯ ಪ್ರತಿ ನೀಡಬೇಕೆಂದರು ಹಾಗೂ ರಾಜ್ಯಪಾಲರು ಕನ್ನಡದಲ್ಲೇ ಮಾತನಾಡಬೇಕೆಂದು ಒತ್ತಾಯಿಸಿದರು.