ಬೆಂಗಳೂರು: ರಾಜ್ಯದಲ್ಲಿರುವ ವಲಸೆ ಕಾರ್ಮಿಕರ ಪ್ರಯಾಣಕ್ಕೆ ಯಾವುದೇ ಅಡ್ಡಿ ಇಲ್ಲ. ಹೊರ ರಾಜ್ಯಗಳಿಂದ ಬಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿರುವ ಕಾರ್ಮಿಕರನ್ನು ವಾಪಸ್ ಕಳುಹಿಸುವ ಸಂಬಂಧ ಆಯಾ ರಾಜ್ಯಗಳಿಗೆ ಪತ್ರ ಬರೆದಿದ್ದು, ಅಲ್ಲಿಂದ ಪ್ರತಿಕ್ರಿಯೆ ಬರಬೇಕಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಸ್ಪಷ್ಟನೆ ನೀಡಿದೆ.
ಉತ್ತರ ಭಾರತದ ವಿವಿಧ ರಾಜ್ಯಗಳಿಂದ ರಾಜ್ಯಕ್ಕೆ ಬಂದಿರುವ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ಎಐಟಿಸಿಯು ಸಂಘಟನೆ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲ ವಿಕ್ರಂ ಹುಯಿಲ್ಗೋಳ್ ಲಿಖಿತ ಮಾಹಿತಿ ನೀಡಿ, ಮೇ 7ರಂದು ತ್ರಿಪುರ, ಮಣಿಪುರ, ಉತ್ತರ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಬಿಹಾರ ರಾಜ್ಯ ಸರ್ಕಾಗಳಿಗೆ ಮತ್ತು ಮೇ 3ರಂದು ಪಶ್ಚಿಮ ಬಂಗಾಳಕ್ಕೆ ಕರ್ನಾಟಕ ಸರ್ಕಾರ ಪತ್ರ ಬರೆದಿದೆ.
ಪತ್ರದಲ್ಲಿ ನಿಮ್ಮ ರಾಜ್ಯದ ಕಾರ್ಮಿಕರನ್ನು ಮೇ 8ರಿಂದ ಕರ್ನಾಟಕದಿಂದ ಹೊರಡಲಿರುವ ವಿಶೇಷ ರೈಲುಗಳಲ್ಲಿ ಕಳುಹಿಸಿಕೊಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಆ ರಾಜ್ಯಗಳಿಂದ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.
ಅಲ್ಲದೆ ಆಯಾ ರಾಜ್ಯಗಳಿಂದ ಪ್ರತಿಕ್ರಿಯೆ ಬಂದ ಕೂಡಲೇ ವಿಶೇಷ ರೈಲುಗಳ ಮೂಲಕ ಕಾರ್ಮಿಕರನ್ನು ಕಳುಹಿಸಿಕೊಡಲಾಗುವುದು. ಇನ್ನು ಭಾರತೀಯ ರೈಲ್ವೆ ಇಲಾಖೆಗೆ ಪತ್ರ ಬರೆದು, ಕಾರ್ಮಿಕರ ಪ್ರಯಾಣಕ್ಕೆ ರೈಲು ಒದಗಿಸುವಂತೆ ಕೋರಲಾಗುವುದು ಎಂದು ಸರ್ಕಾರಿ ವಕೀಲ ವಿಕ್ರಂ ಸ್ಪಷ್ಟನೆ ನೀಡಿದರು. ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಮುಂದೂಡಿತು.