ಬೆಂಗಳೂರು: ಕೋವಿಡ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆ ವಿಳಂಬ ಮಾಡುವಂತಿಲ್ಲ, ಮೃತದೇಹ ಬಂದ ತಕ್ಷಣವೇ ಅಂತ್ಯಕ್ರಿಯೆ ಮಾಡಬೇಕು. ಅಂತ್ಯಕ್ರಿಯೆ ವಿಳಂಬ ಎನ್ನುವ ದೂರು ಬರಬಾರದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಗ್ಗೆ ಪಾದರಾಯನಪುರ ವಿದ್ಯುತ್ ಚಿತಾಗಾರಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ನಂತರ ಮಾಧ್ಯಮಗಳ ಜೊತೆ ಮಾತಾನಡಿದ ಅವರು, ಪ್ರತಿಯೊಂದು ವಿದ್ಯುತ್ ಚಿತಾಗಾರದಲ್ಲಿ ಸರಾಸರಿ 30-60 ಕೋವಿಡ್, ನಾನ್ ಕೋವಿಡ್, ಮೃತದೇಹಗಳು ಬರುತ್ತಿವೆ. ಪಾದರಾಯನಪುರ ವಿದ್ಯುತ್ ಚಿತಾಗಾರ ಮುಂದಿನ ತಿಂಗಳು 7ನೇ ತಾರೀಖಿನಿಂದ ಕಾರ್ಯಾರಂಭಿಸಲಿದೆ ಎಂದರು.
ಚಿತಾಗಾರದಲ್ಲಿ ಕ್ಯೂ ಇರುತ್ತೆ. ಚಿತಾಗಾರದ ಸಿಬ್ಬಂದಿ ಹಣ ಕೇಳುತ್ತಾರೆ ಅನ್ನೋ ಆರೋಪ ಇತ್ತು. ಅಲ್ಲದೆ ಜನರು ರಾಹುಕಾಲ ನೋಡಿಕೊಂಡು ಚಿತಾಗಾರಕ್ಕೆ ಬರುತ್ತಾರೆ, ಪೂಜೆಗಾಗಿ ಸಮಯನೂ ವ್ಯರ್ಥ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಅಲ್ಲದೆ ವಿದ್ಯುತ್ ಚಿತಾಗಾರದ ಸಿಬ್ಬಂದಿಗೆ 17 ಸಾವಿರಕ್ಕೆ ವೇತನ ಹೆಚ್ಚಳ ಮಾಡಿದ್ದೇವೆ. ಇದಲ್ಲದೆ ಕೋವಿಡ್ ಮೃತದೇಹ ಅಂತ್ಯಸಂಸ್ಕಾರ ಮಾಡುವವರಿಗೆ 500 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ವಿದ್ಯುತ್ ಚಿತಾಗಾರದಲ್ಲಿ ಕೊರತೆ ಇರುವ ಅಗತ್ಯ ಸಿಬ್ಬಂದಿ ನೇಮಕಾತಿ ಗೆ ಎಂಜಿನಿಯರ್ ಗೆ ಅನುಮತಿ ನೀಡಲಾಗಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಅಲ್ಲದೆ ಇದೇ ವೇಳೆ ಪಾದರಾಯನಪುರ ವಿದ್ಯುತ್ ಚಿತಾಗಾರ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರ ವಿರುದ್ಧ ಗರಂ ಅದ ಆಯುಕ್ತರು, ಲಾಕ್ ಡೌನ್ ಇರೋದರಿಂದ ವಿಳಂಬ ಅಂತ ಸಬೂಬು ಹೇಳಬೇಕಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿ ಎಂದು ಸೂಚನೆ ಕೊಟ್ಟರು.
ಅಲ್ಲದೆ ಮುಂದಿನ ತಿಂಗಳು 6 ನೇ ತಾರೀಖಿನಂದು ಮತ್ತೆ ಬರ್ತೇನೆ, ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸಿ ಎಂದು ಖಡಕ್ ಸೂಚನೆ ಕೊಟ್ಟರು. ಅಲ್ಲದೆ ನಗರದಲ್ಲಿ ಇನ್ನೂ ಹೆಚ್ಚು ಕಡೆ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲಾಗುವುದು. ಇನ್ನೂ 9 ಕಡೆ ಚಿತಾಗಾರ ನಿರ್ಮಾಣ ಮಾಡಲಾಗುವುದು. ಒಟ್ಟು 21 ಚಿತಾಗಾರಗಳು ಮುಂದಿನ ದಿನಗಳಲ್ಲಿ ಕೆಲಸ ನಿರ್ವಹಣೆ ಮಾಡಲಿವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದರು.