ಬೆಂಗಳೂರು: ಲೋಕಸಮರದ ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ರಾಜ್ಯ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಒಟ್ಟು 2.62 ಕೋಟಿ ಮತದಾರರು 241 ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಸೇರಿದಂತೆ ಅವರ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ನಟಿ ಸುಮಲತಾ ಅಂಬರೀಶ್, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಚಿವ ಕೃಷ್ಣ ಬೈರೇಗೌಡ, ಶೋಭಾ ಕರಂದ್ಲಾಜೆ, ವೀರಪ್ಪ ಮೊಯ್ಲಿ ಸೇರಿದಂತೆ ಇತರೆ ಘಟಾನುಘಟಿಗಳು ಅಖಾಡದಲ್ಲಿದ್ದಾರೆ.
ಇಂದು ಉಡುಪಿ-ಚಿಕ್ಕಬಳ್ಳಾಪುರ, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಒಟ್ಟು 30,164 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ಕಾರ್ಯಕ್ಕಾಗಿ 1,54,262 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಭದ್ರತೆಗಾಗಿ 38,597 ಪೊಲೀಸ್ ಸಿಬ್ಬಂದಿ, 7,727 ಸಂಚಾರ ಪೊಲೀಸ್ ಸಿಬ್ಬಂದಿ ಮತ್ತು 10,819 ಇತರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮೊದಲ ಹಂತದ ಚುನಾವಣೆಯಲ್ಲಿ 6,012 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಪರಿಗಣಿಸಲಾಗಿದೆ. 990 ಮತಗಟ್ಟೆಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಯ 55 ಕಂಪನಿಗಳನ್ನು ನಿಯೋಜಿಸಲಾಗಿದೆ. 2,038 ಮತಗಟ್ಟೆಯಲ್ಲಿ ಸೂಕ್ಷ್ಮ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. 1,666 ಮತಗಟ್ಟೆಗಳಲ್ಲಿ ವೆಬ್ ಕ್ಯಾಮರಾಗಳನ್ನು ಹಾಕಲಾಗಿದೆ. ಅಲ್ಲದೇ, 2,308 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫರ್‌ಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
14 ಲೋಕಸಭೆ ಕ್ಷೇತ್ರದಲ್ಲಿ 2.67 ಕೋಟಿ ಮತದಾರರಿದ್ದು, 1.35 ಕೋಟಿ ಪುರುಷರು, 1.32 ಕೋಟಿ ಮಹಿಳೆಯರು, 2,817 ಇತರರು ಇದ್ದಾರೆ. ಮತದಾರರ ಗುರುತಿನ ಚೀಟಿ ಬದಲಿಗೆ ಇತರೆ 11 ದಾಖಲೆಗಳನ್ನು ತೋರಿಸಿ ಮತ ಚಲಾಯಿಸಲು ಅವಕಾಶ ಇದೆ. ಸಾಮಾಜಿಕ ಜಾಲತಾಣದ ಮೂಲಕ ಮತಚಲಾಯಿಸುವ ಅವಕಾಶ ಇಲ್ಲ ಹಾಗೂ ಮತ ಹಾಕಲು ಯಾವುದೇ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿಲ್ಲ. ಇಂತಹ ಸುಳ್ಳು ವದಂತಿಗಳ ಬಗ್ಗೆ ಮತದಾರರು ಕಿವಿಗೊಡದೆ ಮತಗಟ್ಟೆಗೆ ಬಂದು ಮತಚಲಾಯಿಸಬೇಕು ಎಂದು ಸಂಜೀವ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 2672 ಮತಗಟ್ಟೆಗಳೊಂದಿಗೆ ಅತಿ ಹೆಚ್ಚು ಮತಗಟ್ಟೆಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರವು ಕಡಿಮೆ ಮತಗಟ್ಟೆಗಳನ್ನು ಹೊಂದಿದ್ದು, 1,837 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 393 ಸಖಿ ಮತಗಟ್ಟೆಗಳು, 32 ಪಾರಂಪರಿಕ ಮತ್ತು ವಿಕಲಚೇತನರಿಗಾಗಿ 61 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಬೆಂಗಳೂರು ಕೇಂದ್ರದಲ್ಲಿ ಎಂ-3 ಇವಿಎಂ:
ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದ ಕ್ಷೇತ್ರದಲ್ಲಿ ಮಾತ್ರ ಹೊಸ ತಂತ್ರಜ್ಞಾನವುಳ್ಳ ಎಂ-3 ಇವಿಎಂ ಬಳಸಲಾಗುತ್ತಿದೆ. ಉಳಿದ ಕ್ಷೇತ್ರಗಳಲ್ಲಿ ಎಂ-2 ಇವಿಎಂ ಬಳಕೆ ಮಾಡಲಾಗುತ್ತಿದೆ. ಎಂ-2 ಇವಿಎಂಗಿಂತ ಎಂ-3 ಇವಿಎಂ ಹೊಸ ತಂತ್ರಜ್ಞಾನ ಹೊಂದಿದೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 4,996 ಬ್ಯಾಲೆಟ್ ಯೂನಿಟ್, 2,498 ಕಂಟ್ರೋಲ್ ಯೂನಿಟ್ ಮತ್ತು 2,855 ವಿವಿ ಪ್ಯಾಟ್‌ಗಳನ್ನ ಬಳಸಲಾಗುವುದು. ಎಂ-2 ಇವಿಎಂ ಬಳಕೆ ಕ್ಷೇತ್ರದಲ್ಲಿ 47,116 ಬ್ಯಾಲೆಟ್ ಯೂನಿಟ್, 33,698 ಕಂಟ್ರೋಲ್ ಯೂನಿಟ್ ಮತ್ತು 35,103 ವಿವಿ ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. 14 ಕ್ಷೇತ್ರಗಳಲ್ಲಿ ಒಟ್ಟು 30,104 ಮತಗಟ್ಟೆಗಳಲ್ಲಿ 52,112 ಬ್ಯಾಲೆಟ್ ಯೂನಿಟ್, 36,196 ಕಂಟ್ರೋಲ್ ಯೂನಿಟ್ ಮತ್ತು 37,705 ವಿವಿ ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಮಾಹಿತಿ ನೀಡಿದ್ದಾರೆ.