ಬೆಂಗಳೂರು : ದೇಶದ ಆರ್ಥಿಕತೆ ಬುಡಮೇಲಾಗುವಂತೆ ಮಾಡಿರುವ ಕೋವಿಡ್-19ಗೆ ಜಗತ್ತಿನ ನಾನಾ ರಾಷ್ಟ್ರಗಳು ಲಸಿಕೆ ಕಂಡು ಹಿಡಿಯಲು ಮುಂದಾಗಿವೆ. ದೇಶದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿರುವವರಿಗೆ ಪರ್ಯಾಯವೆಂಬಂತೆ ಮಲೇರಿಯಾಗೆ ನೀಡಲಾಗುವ ಔಷಧಿ ನೀಡಲಾಗುತ್ತಿದೆ.
ಈ ನಡುವೆ ಕಾಳಸಂತೆಯಲ್ಲಿ ಕೊರೊನಾ ಔಷಧಿ ಎಂದು ಹೇಳಿ ಮಾರಾಟ ಮಾಡುವ ಜಾಲ ನಗರದಲ್ಲಿ ಸಕ್ರಿಯವಾಗಿದೆ. ಲಕ್ಷಾಂತರ ಜನರನ್ನು ಬಲಿಪಡೆದಿರುವ ಕೊರೊನಾಗೆ ಔಷಧಿ ನೀಡುವುದಾಗಿ ಹೇಳಿ ವಿಧ-ವಿಧವಾದ ಔಷಧಿ ನೀಡಿ ಅಮಾಯಕರಿಂದ ಲಕ್ಷಾಂತರ ರೂ. ಮೋಸ ಮಾಡಿದ್ದ ಕ್ರೋಮನ್ ದೇಶದ ನಾಲ್ವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಸೆರೆ ಹಿಡಿದಿದ್ದರು.
ಇದೇ ರೀತಿ ಕೊರೊನಾ ಲಸಿಕೆ ಕಂಡು ಹಿಡಿಯುತ್ತಿರುವುದಾಗಿ ಹೇಳಿ ಹಿಮಾಚಲಪ್ರದೇಶ, ಮೇಘಾಲಯದಲ್ಲಿರುವ ಹರ್ಬಲ್ ಕಂಪನಿಗಳಿಂದ ಲಸಿಕೆ ಬಳಸುವ ಲಿಕ್ವಿಡ್ ತರಿಸಿಕೊಂಡು ವಿದೇಶಕ್ಕೆ ಸರಬರಾಜು ಮಾಡಿದರೆ ಲಕ್ಷಾಂತರ ರೂ. ಸಂಪಾದಿಸಬಹುದು ಎಂದು ಮುಗ್ಧ ಜನರನ್ನು ಆನ್ಲೈನ್ ಮೋಸ ಮಾಡುತ್ತಿರುವುದು ಸಾಮಾನ್ಯ ಎಂಬಂತಾಗಿದೆ.
ಸದ್ಯ ಕೊರೊನಾ ವೈರಸ್ ಲಸಿಕೆಗೆ ಪರ್ಯಾಯವಾಗಿ ಮಲೇರಿಯಾ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೈಡ್ರಾಕ್ಸಿಕ್ಲೊರೋಕ್ವಿನ್ ಮಾತ್ರೆಗಳನ್ನು ನೀಡಲಾಗುತ್ತಿದೆ. ಅದೇ ರೀತಿ ರೆಮ್ ಡೆಸಿವಿಯರ್ ಚುಚ್ಚುಮದ್ದು ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿದೆ. ಒಂದು ಬಾರಿ ಚುಚ್ಚುಮದ್ದು ಹಾಕಿಸಿಕೊಳ್ಳಲು ಸುಮಾರು ₹3 ಸಾವಿರಕ್ಕಿಂತ ಹೆಚ್ಚು ಹಣ ಖರ್ಚು ಮಾಡಬೇಕಿದೆ. ಹೈಡ್ರಾಕ್ಸಿಕ್ಲೊರೋಕ್ವಿನ್ ಹಾಗೂ ರೆಮ್ ಡೆಸಿವಿಯರ್ ಔಷಧಿಗಳ ಪ್ರತಿರೂಪವಾಗಿ ಅನುಮತಿ ಪಡೆದುಕೊಳ್ಳದೆ ಡ್ರಗ್ಸ್ ಕಂಪನಿಗಳು ಕಾಳಸಂತೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಔಷಧಿ ರವಾನೆ ಮಾಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕೊರೊನಾ ಹೆಸರಿನಲ್ಲಿ ನಡೆಯುವ ಔಷಧಿ ಮಾಫಿಯಾ ತಡೆಗೆ ಪೊಲೀಸ್ ಇಲಾಖೆ ಹಾಗೂ ರಾಜ್ಯ ಔಷಧ ನಿಯಂತ್ರಣ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾ ಹೆಸರಿನಲ್ಲಿ ಔಷಧಿಗಳು ಮೆಡಿಕಲ್ ಸ್ಟೋರ್ಗಳು ಹಾಗೂ ಫಾರ್ಮಸಿ ಶಾಪ್ಗಳಿಂದ ಅಕ್ರಮವಾಗಿ ಮಾರಾಟ ಮಾಡಿಲ್ಲ. ಒಂದು ವೇಳೆ ಮಾರಾಟ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಔಷಧ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ವೈದ್ಯರ ಶಿಫಾರಸ್ಸಿಲ್ಲದೆ ಮೆಡಿಕಲ್ ಶಾಪ್ಗಳಲ್ಲಿ ಕೊರೊನಾ ಚಿಕಿತ್ಸೆಗೆ ಪರ್ಯಾಯವಾಗಿ ಮಾತ್ರೆಗಳು ಅಥವಾ ಔಷಧಿ ನೀಡುವುದನ್ನು ನಿಷೇಧಿಸಲಾಗಿದೆ. ಕೆಮ್ಮು, ಕಫ, ಉಸಿರಾಟ ತೊಂದರೆ ಸೇರಿ ಕೊರೊನಾ ಸೋಂಕಿನ ಗುಣಲಕ್ಷಣವಿದ್ದರೆ ವೈದ್ಯರಿಂದ ಅನುಮತಿ ಪಡೆದ ಮೆಡಿಕಲ್ ಶಾಪ್ಗಳಲ್ಲಿ ಔಷಧಿ ಖರೀದಿಸಬೇಕು. ಖರೀದಿ ಬಳಿಕ ಗ್ರಾಹಕರ ಮೊಬೈಲ್ ನಂಬರ್ ಸಂಗ್ರಹಿಸುವ ಕೆಲಸ ಮೆಡಿಕಲ್ ಸ್ಟೋರ್ ಮಾಲೀಕರು ಮಾಡಬೇಕು ಎಂದು ಆದೇಶಿಸಲಾಗಿದೆ.
ಇದು ಆಸ್ಪತ್ರೆ ಹಾಗೂ ಕ್ಲಿನಿಕ್ಗಳಿಗೂ ಅನ್ವಯವಾಗಲಿವೆ. ಕೊರೊನಾ ಔಷಧಿ ಕಂಡು ಹಿಡಿದಿರುವುದಾಗಿ ಹೇಳಿ ಮೋಸ ಮಾಡುವವರ ಜಾಲಕ್ಕೆ ಸಿಲುಕಬೇಡಿ. ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಾಗುವ ತನಕ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಗತ್ಯವಾದ್ರೆ ಮಾತ್ರ ಹೊರ ಬನ್ನಿ. ಆದಷ್ಟು ಬಿಸಿ ನೀರು ಹಾಗೂ ಕಷಾಯ ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಎಂದು ಡಿವೈನ್ ಆಸ್ಪತ್ರೆ ವೈದ್ಯ ಸ್ಟೀಫನ್ ಸಲಹೆ ನೀಡಿದ್ದಾರೆ.