ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಡಿ 7 ಅಧಿಕಾರಿಗಳ ಮನೆ, ಕಚೇರಿ ಗುರಿಯಾಗಿಸಿಕೊಂಡು ನಿನ್ನೆ ಭ್ರಷ್ಟಾಚಾರ ನಿಗ್ರಹ ದಳ ರಾಜ್ಯದ 36 ಕಡೆ ಏಕಕಾಲಕ್ಕೆ ದಾಳಿ ನಡೆಸಿತು. ಭ್ರಷ್ಟ ಅಧಿಕಾರಿಗಳಿಂದ ಎಸಿಬಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ, ನಗದು, ಕೆ.ಜಿ ಗಟ್ಟಲೆ ಚಿನ್ನಾಭರಣ ಸಂಪತ್ತನ್ನು ಬಯಲಿಗೆಳೆದಿದೆ.
ಏಕಕಾಲಕ್ಕೆ ಇಷ್ಟು ಕಡೆ ದಾಳಿ ನೆಡೆದಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. ನಿನ್ನೆ ತಡರಾತ್ರಿ ಶೋಧಕಾರ್ಯ ಅಂತ್ಯಗೊಂಡಿದೆ. ಒಟ್ಟು ಏಳು ಅಧಿಕಾರಿಗಳಿಗೆ ಸೇರಿದ್ದ ಸ್ಥಳಗಳ ಮೇಲೆ ಏಳು ಎಸಿಬಿ ಎಸ್ಪಿಗಳ ನೇತೃತ್ವದಲ್ಲಿ ದಾಳಿ ನೆಡೆದಿದೆ. ನಿನ್ನೆ ಬೆಳಗ್ಗೆ ಎಸಿಬಿಯ 175 ಅಧಿಕಾರಿಗಳು ರಾಜ್ಯದ 36 ಸ್ಥಳಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.ಅಧಿಕಾರಿಗಳಿಗೆ ಎಸಿಬಿ ಮುಂದೆ ಹಾಜರಾಗುವಂತೆ ತನಿಖಾಧಿಕಾರಿಗಳು ಸೂಚಿಸಿದ್ದಾರೆ.
ಸಹಕಾರ ಸಂಘಗಳ ಜಂಟಿ ನಿಬಂಧಕ ಡಿ.ಪಾಂಡುರಂಗ ಗರಗ್ ಮನೆಯಲ್ಲಿ ಅಧಿಕಾರಿಗಳ ಪರಿಶೀಲನೆ ನಿನ್ನೆ ರಾತ್ರಿ 11.30 ಕ್ಕೆ ಅಂತ್ಯಗೊಂಡಿದೆ. ಸತತ 18 ಗಂಟೆಗಳವರಗೆ ಪಾಂಡುರಂಗ ಮನೆ, ಕಚೇರಿ ಸೇರಿದಂತೆ ಹಲವು ಕಡೆ ಎಸಿಬಿ ಅಧಿಕಾರಿಗಳು ಜಾಲಾಡಿದ್ದಾರೆ. ಪಾಂಡುರಂಗ ಗರಗ್ ಮನೆಯಿಂದ ಲ್ಯಾಪ್ ಟಾಪ್, ಆಸ್ತಿ ಪಾಸ್ತಿ ದಾಖಲೆ ಪತ್ರ ವಶ ಪಡಿಸಿಕೊಳ್ಳಲಾಗಿದೆ.
ಪಾಂಡುರಂಗಗೆ ಸೇರಿದ 2 ಮನೆ, 1 ಫ್ಲ್ಯಾಟ್, 3 ಕಾರು, 1 ಟ್ರ್ಯಾಕ್ಟರ್, 3 ದ್ವಿಚಕ್ರ ವಾಹನ, 1 ಕೆ.ಜಿ. 166 ಗ್ರಾಂ ಚಿನ್ನಾಭರಣ, 20 ಲಕ್ಷ ಮೌಲ್ಯದ ವಿಮಾ ಪಾಲಿಸಿಗಳು, 31 ಕೆ.ಜಿ ಬೆಳ್ಳಿ ಸಾಮಾನುಗಳು, 10 ಎಕರೆ ಜಮೀನಿನ ಪತ್ರಗಳು, 4.40 ಲಕ್ಷ ರೂ. ನಗದು, 20 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು ಹದಿನೈದು ಅಧಿಕಾರಿಗಳು ಪಾಂಡುರಂಗ ಮನೆಯಲ್ಲಿ ಶೋಧ ನಡೆಸಿದ್ದಾರೆ.
ದಾಳಿಗೊಳಗಾದ ಅಧಿಕಾರಿಗಳು ಇನ್ನಷ್ಟು ಪ್ರಮಾಣದಲ್ಲಿ ಆಸ್ತಿ ಹೊಂದಿರುವ ಸಾಧ್ಯತೆಗಳಿವೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನೆಡೆಸಲಾಗುವುದು. ಜಪ್ತಿ ಮಾಡಿದ ವಸ್ತುಗಳಿಗೆ ದಾಖಲೆ ನೀಡುವಂತೆ ಸೂಚಿಸಲಾಗುವುದು ಎಂದು ಎಸಿಬಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.