ಬೆಂಗಳೂರು : ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಇಂಡಿಯಾದ ಅಡಿಯಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಸ್ವಯಂಪ್ರೇರಿತರಾಗಿ ದೇಹಕ್ಕೆ ಹಸಿರು ಮತ್ತು ನೀಲಿ ಬಣ್ಣ ಪೇಯಿಂಟ್ ಮಾಡಿಸುವ ಮೂಲಕ ಸಸ್ಯಾಹಾರಿ ಆಹಾರ, ಹವಾಮಾನ ವೈಪರೀತ್ಯದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಇತರ ಪರಿಸರ ಬಿಕ್ಕಟ್ಟುಗಳನ್ನು ಪರಿಹರಿಸಲು ಜಿ20 ಶೃಂಗಸಭೆಗೆ ಪರಿಸರ ಮತ್ತು ಹವಾಮಾನ ಸುಸ್ಥಿರತೆಯ ಕಾರ್ಯಾಚರಣೆಯ ತಂಡದಲ್ಲಿ ಭಾಗವಹಿಸುತ್ತಿರುವವರಿಗೆ ಒತ್ತಾಯಿಸುತ್ತಿದ್ದಾರೆ.
ವೀಗನ್ ಆಗಿ ಬದಲಾಗಿ: ಭೂಮಿಗಾಗಿ ವೀಗನ್ ಆಗಿರಿ ಎಂದು ಫಲಕಗಳನ್ನು ಹಿಡಿದುಕೊಂಡಿರುವ ಇವರು ದಾರಿಹೋಕರಿಗೆ ಮಾಂಸ, ಮೊಟ್ಟೆ ಮತ್ತು ಹೈನಿನ ಉತ್ಪನ್ನಗಳಿಂದ ಭೂಮಿಗೆ ಉಂಟಾಗುತ್ತಿರುವ ಹಾನಿಯನ್ನು ವಿವರಿಸುತ್ತಿದ್ದಾರೆ. ಈ ಕುರಿತು ಪೇಟಾ ಇಂಡಿಯಾದ ಅಭಿಯಾನ ವ್ಯವಸ್ಥಾಪಕ ರಾಧಿಕಾ ಸೂರ್ಯವಂಶಿ ಮಾತನಾಡಿ, ಆಹಾರಕ್ಕಾಗಿ ಪ್ರಾಣಿಗಳನ್ನು ಬೆಳೆಸುವುದು ಪರಿಸರದ ಅವನತಿಗೆ ಕಾರಣವಾಗುತ್ತಿದೆ. ಇದಕ್ಕಾಗಿ ಬೃಹತ್ ಪ್ರಮಾಣದಲ್ಲಿ ಭೂಮಿ, ಆಹಾರ, ಶಕ್ತಿ ಮತ್ತು ನೀರಿನ ಸಂಪನ್ಮೂಲಗಳ ಅಗತ್ಯವಿದ್ದು, ಪರಿಣಾಮ ಹಸಿರುಮನೆ ಅನಿಲಗಳ ಅಪಾರ ಹೊರಸೂಸುವಿಕೆಯಾಗುತ್ತಿದೆ. ಪೇಟಾ ಇಂಡಿಯಾ ವೀಗನ್ ಆಹಾರಗಳನ್ನು ಉತ್ತೇಜಿಸುವ ಮೂಲಕ ಹವಾಮಾನ ವೈಪರೀತ್ಯಗಳಿಂದಾಗಬಹುದಾದ ಕೆಟ್ಟ ಪರಿಣಾಮಗಳಿಂದ ನಮ್ಮನ್ನು ಉಳಿಸಿ ಎಂದು ಜಿ 20 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವವರನ್ನು ಈ ಮೂಲಕ ಕೋರಲಾಗುತ್ತದೆ ಎಂದಿದ್ದಾರೆ.
ವೀಗನ್ ಪ್ರಯೋಜನವೇನು?: ಮೊಟ್ಟೆ, ಮಾಂಸ ಮತ್ತು ಹೈನಿನ ಉತ್ಪನ್ನಗಳು ಮಾಲಿನ್ಯದ ಬಹುದೊಡ್ಡ ಕಾರಣವಾಗಿದೆ. ಸಮುದ್ರದ ವಲಯಗಳು ಭೂ ಬಳಕೆಯಿಂದ ಆವಾಸಸ್ಥಾನದತ್ತ ಸಾಗುತ್ತಿವೆ. ಇದು ಹಲವು ಪ್ರಾಣಿ, ಪಕ್ಷಿ, ಜಲಚರಗಳ ಅಳಿವಿನ ಅಪಾಯಕ್ಕೆ ಕಾರಣವಾಗುತ್ತಿದೆ. ಸಾರಿಗೆ ವ್ಯವಸ್ಥೆಗಳಿಂದ ಹೆಚ್ಚು ಹಸಿರುಮನೆ ಅನಿಲ ಹೊರಸೂಸುವಿಕೆ ಉಂಟಾಗುತ್ತಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ವೀಗನ್ ಆಗಿ ಬದಲಾಗುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಂಗಾಲದ ಹೆಜ್ಜೆಗುರುತನ್ನು 73% ರಷ್ಟು ಕಡಿಮೆ ಮಾಡುತ್ತಾನೆ ಎಂದು ಕಂಡುಹಿಡಿದಿದ್ದಾರೆ. ಆದ್ದರಿಂದ ಇದು ಭೂಮಿಯ ಮೇಲೆ ವ್ಯಕ್ತಿಯ ಪ್ರಭಾವವನ್ನು ಕಡಿಮೆ ಮಾಡುವ ಏಕೈಕ ದೊಡ್ಡ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.
ಸಸ್ಯಹಾರಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು: ವಿಗನ್ ಆಗಿ ಬದಲಾಗುವುದರಿಂದ ಮಾನವನ ಆರೋಗ್ಯದ ಮೇಲೆ ನೇರ ಪ್ರಯೋಜನ ಉಂಟಾಗುತ್ತದೆ. ಪ್ರಾಣಿ, ಮಾಂಸ, ಮಾರುಕಟ್ಟೆಯ ಮೂಲಕ ಕೋವಿಡ್ -19 ಮಾನವನಿಗೆ ಹರಡಿದ ಮೊದಲ ಸೋಂಕು ಎಂದು ಹೇಳಲಾಗುತ್ತಿದೆ. ಅದೇ ರೀತಿಯಾಗಿ ಸಾರ್ಸ್, ಹಕ್ಕಿ ಜ್ವರ, ಹಂದಿ ಜ್ವರ, ಮತ್ತು ಇತರ ಕಾಯಿಲೆಗಳು ಸಹ ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದರಿಂದ ಮನುಷ್ಯರಿಗೆ ಹರಡುತ್ತದೆ ಎಂದು ಧೃಡಪಟ್ಟಿದೆ. ನ್ಯೂಟ್ರಿಷನ್ ಮತ್ತು ಡಯಟಿಕ್ಸ್ ಅಕಾಡೆಮಿ ಪ್ರಕಾರ, ಎರಡನೆಯ ವಿಧದ ಮಧುಮೇಹ, ಅಧಿಕರಕ್ತದೊತ್ತಡ, ಹೃದ್ರೋಗ ಸಮಸ್ಯೆಗಳು, ನಿರ್ದಿಷ್ಟ ಕ್ಯಾನ್ಸರ್ ರೋಗಗಳು ಮತ್ತು ಬೊಜ್ಜು ಸಮಸ್ಯೆ ಒಳಗೊಂಡಂತೆ ಇತರ ಅನೇಕ ಅಪಾಯಕಾರಿ ರೋಗಗಳು ಉಂಟಾಗುವ ಕಡಿಮೆ ಸಾಧ್ಯತೆಯನ್ನು ವೀಗನ್ಗಳು ಹೊಂದುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ವೀಗನ್ ಸೇವನೆಯಿಂದಲೂ ಪ್ರಾಣಿಗಳಿಗೆ ಸಹ ಸಹಾಯಕವಾಗಿದೆ. ಪೇಟಾ ಇಂಡಿಯಾ ತನ್ನ ವಿಡಿಯೋದಲ್ಲಿ ತೋರಿಸಿದಂತೆ, ಆಹಾರಕ್ಕಾಗಿ ಕೊಲ್ಲಲ್ಪಡುವ ಕೋಳಿಗಳನ್ನು ಸಾಮಾನ್ಯವಾಗಿ ತಲೆಕೆಳಗಾಗಿಸಿ ಅದರ ಕತ್ತುಗಳನ್ನು ಸೀಳಲಾಗುತ್ತದೆ. ಹಸುಗಳು ಮತ್ತು ಎಮ್ಮೆಗಳನ್ನು ಒಂದು ಕಸಾಯಿಖಾನೆಗೆ ಕರೆದೊಯ್ಯುವಾಗ ಅವುಗಳ ಮೂಳೆಗಳು ಮುರಿದುಹೋಗುವಂತೆ ಸಣ್ಣ ಗಾಡಿಗಳಲ್ಲಿ ಹೆಚ್ಚು ಸಂಖ್ಯೆಗಳಲ್ಲಿ ತುಂಬಿಸಲಾಗುತ್ತದೆ ಮತ್ತು ಹಂದಿಗಳು ಚೀರುತ್ತಿದ್ದರೂ ಅದರ ಹೃದಯವನ್ನು ಸೀಳಲಾಗುತ್ತದೆ.
ದೋಣಿಗಳಲ್ಲಿ ಮೀನುಗಳು ಜೀವಂತ ಇರುವಾಗಲೇ ಅವುಗಳನ್ನು ಕತ್ತರಿಸಲಾಗುತ್ತದೆ. ಇನ್ನು ಮೊಟ್ಟೆ ಉದ್ಯಮದಲ್ಲಿ ಆಗಷ್ಟೇ ಜನಿಸುವ ಗಂಡು ಕೋಳಿಮರಿಗಳು ಮೊಟ್ಟೆಗಳನ್ನು ಹಾಕುವುದಿಲ್ಲ ಎನ್ನುವ ಕಾರಣಕ್ಕಾಗಿ ಅವುಗಳನ್ನು ಜೀವಂತ ಸುಡಲಾಗುತ್ತದೆ. ಅದೇ ಹೈನಿನ ಉದ್ಯಮದಲ್ಲಿ ಗಂಡು ಕರುಗಳು ಹಾಲು ಉತ್ಪಾದನೆ ಮಾಡುವುದಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಸಾಯಿಸಲಾಗುತ್ತದೆ ಅಥವಾ ಅವು ಜೀವ ಬಿಡುವವರೆಗೆ ಅವುಗಳಿಗೆ ಮೇವು ಅಥವಾ ನೀರನ್ನು ಕೊಡದೆ ಅವುಗಳನ್ನು ತ್ಯಜಿಸಲಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಡಯಟ್‌ನಲ್ಲಿ ಈ ಆಹಾರ ಸೇರಿಸಿ, ಕ್ಯಾನ್ಸರ್ ಅಪಾಯ ಕಡಿಮೆ ಮಾಡಿಕೊಳ್ಳಿ!