ಬೆಂಗಳೂರು: ನೆರೆ ಹಾಗೂ ಬರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ರಾಜ್ಯ ಬಿಜೆಪಿ ಸರ್ಕಾರ ಕೇಂದ್ರದಿಂದ ಅಗತ್ಯ ನೆರವು ತರುವಲ್ಲಿ ವಿಫಲವಾಗಿದೆ. ರಾಜ್ಯ ಬಿಜೆಪಿ ನಾಯಕರು ಉತ್ತರಕುಮಾರರು ಅಂತಾ ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ನೆರೆ ಪರಿಹಾರ ವಿಷಯದಲ್ಲಿ ಇಂತಹ ಯೋಗ್ಯತೆ, ಸಮರ್ಥತೆ, ಸಂವೇದನೆಯನ್ನು ತೋರಿರುವ ಇವರುಗಳು ಕರ್ನಾಟಕದ ಉತ್ತರಕುಮಾರರೇ ಸರಿ ಎಂದು ಹೇಳಿದೆ. ನಿರಂತರವಾಗಿ ರಾಜ್ಯ ಬಿಜೆಪಿ ನಾಯಕರನ್ನು, ಸರ್ಕಾರವನ್ನು ಠೀಕಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷ ಇದೀಗ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ನಾಯಕರ ಕಾಲೆಳೆಯುವ ಕಾರ್ಯ ಮಾಡಿದೆ. ಈ ಹಿಂದೆ ಬಿಜೆಪಿ ನಾಯಕರು ಹೇಳಿದ್ದ ಮಾತುಗಳನ್ನು ಟ್ವೀಟ್ನಲ್ಲಿ ಬಳಸಿ ಲೇವಡಿ ಮಾಡಿದೆ.
ನೋಟ್ ಪ್ರಿಂಟ್ ಮಾಡುವ ಮಷಿನ್ ಇಲ್ಲ- ಬಿಎಸ್ವೈ,, 10,000 ರೂ. ಕೊಟ್ಟಿದ್ದೇ ಹೆಚ್ಚಾಯ್ತು-ಕೆ.ಎಸ್.ಈಶ್ವರಪ್ಪ,, ಶಾಲಾ ಮಕ್ಕಳು ದೇಣಿಗೆ ಸಂಗ್ರಹಿಸಬೇಕು- ಡಾ.ಅಶ್ವತ್ಥ್ ನಾರಾಯಣ,, ಕೇಂದ್ರದ ಮೊರೆ ಹೋಗುವ ಅಗತ್ಯವಿಲ್ಲ-ತೇಜಸ್ವಿ ಸೂರ್ಯ,, ಹೀಗೆ ಒಬ್ಬೊಬ್ಬ ಬಿಜೆಪಿ ನಾಯಕರು ನೆರೆ ಪರಿಹಾರದ ಕುರಿತಂತೆ ನೀಡಿರುವ ಪ್ರತಿಕ್ರಿಯೆಗಳನ್ನೇ ಪ್ರಸ್ತಾಪಿಸಿ ಕಾಂಗ್ರೆಸ್ ಲೇವಡಿ ಮಾಡಿದೆ. ವಿವಿಧ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರು ಆಡಿದ್ದ ಮಾತನ್ನು ಅವರಿಗೆ ನೆನಪಿಸುವ ಮೂಲಕ ಕಮಲ ನಾಯಕರನ್ನು ತೀವ್ರವಾಗಿ ಟೀಕಿಸುವ ಕಾರ್ಯ ಮಾಡಿದೆ.
ರಾಜ್ಯದ ಜನರ ಸಮಸ್ಯೆ ವಿಚಾರವಾಗಿ ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರದ ಬಳಿ ಪರಿಹಾರದ ವಿಚಾರವಾಗಿ ಗಂಭೀರವಾಗಿ ಪ್ರಸ್ತಾಪಿಸುತ್ತಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.