ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಐಪಿಎಸ್ ಅಧಿಕಾರಿ ಎಂದು ಖ್ಯಾತಿಯಾಗಿದ್ದ ಅಣ್ಣಾಮಲೈ ರಾಜೀನಾಮೆ ಪತ್ರವನ್ನು ಮೂರು ತಿಂಗಳ ನಂತರ ಕೇಂದ್ರ ಗೃಹ ಇಲಾಖೆ ಅಂಗೀಕರಿಸಿದೆ.

ಕಳೆದ ಮೇ 28ರಂದು ಅಣ್ಣಾಮಲೈ ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದರು.ಈ ಸಂಬಂಧ ಮೇ 29ರಂದು ಪೊಲೀಸ್ ಇಲಾಖೆಯ ಡಿಜಿ ಹಾಗೂ ಐಜಿ ನೀಲಮಣಿ ಎನ್.ರಾಜುಗೆ ರಾಜೀನಾಮೆ ಪತ್ರ ಕಳುಹಿಸಿದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಭೇಟಿಯಾಗಿ ರಾಜೀನಾಮೆಯ ನಿರ್ಧಾರ ತಿಳಿಸಿದ್ದರು. ಅಣ್ಣಾಮಲೈ ರಾಜೀನಾಮೆ ಪತ್ರ ನೀಡಿದ ಬಳಿಕ ಸುಮಾರು 15 ದಿನಗಳ ನಂತರ ಬೆಂಗಳೂರು ದಕ್ಷಿಣ ವಿಭಾಗಕ್ಕೆ ರೋಹಿಣಿ ಸಫೆಟ್ ನಿಯುಕ್ತಿಗೊಳಿಸಲಾಗಿತ್ತು. ಅಧಿಕೃತವಾಗಿ ಅಂದ್ರೇ ಅಣ್ಣಾಮಲೈ ಸೇವೆಯಿಂದ ಹಿಂದೆ ಸರಿದಿದ್ದರು.
ತಮಿಳುನಾಡು ಮೂಲದ ಅಣ್ಣಾಮಲೈ 2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. ಕರ್ನಾಟಕ ಕೇಡರ್ನಲ್ಲಿ ಆಯ್ಕೆಯಾಗಿದ್ದರು. ಮೊದಲ ವೃತ್ತಿ ಜೀವನ ಕಾರ್ಕಾಳದಿಂದ ಆರಂಭಿಸಿ ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಾಕಷ್ಟು ಜನಮನ್ನಣೆ ಗಳಿಸಿದ್ದರು. ಮೈತ್ರಿ ಸರ್ಕಾರದಲ್ಲಿ ಬೆಂಗಳೂರು ದಕ್ಷಿಣ ವಿಭಾಗಕ್ಕೆ ಡಿಸಿಪಿ ಆಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಾರ್ಯವೈಖರಿಗೆ ರಾಜಧಾನಿ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.