ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಲು ಸಿಸಿಬಿ ಸಂಘಟಿತ ಅಪರಾಧ ಪತ್ತೆ ದಳವನ್ನು ಎರಡು ವಿಭಾಗಗಳಾಗಿ ವಿಭಜಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುತ್ತೋಲೆ ಹೊರಡಿಸಿದ್ದಾರೆ.
ನಗರದ ಪೂರ್ವ ಮತ್ತು ಪಶ್ಚಿಮ ಸಂಘಟಿತ ಅಪರಾಧ ಪತ್ತೆ ದಳ ಎಂದು ಎರಡು ವಿಭಾಗಗಳಾಗಿ ಪ್ರತ್ಯೇಕಿಸಲಾಗಿದೆ. ಪೂರ್ವ ವಿಭಾಗಕ್ಕೆ ಎಸಿಪಿ ಹೆಚ್.ಎಸ್. ಪರಮೇಶ್ವರ್ ಹಾಗೂ ಪಶ್ಚಿಮ ವಿಭಾಗಕ್ಕೆ ಎಸಿಪಿ ಹೆಚ್. ಧರ್ಮೇಂದ್ರರನ್ನು ನಿಯೋಜನೆ ಮಾಡಲಾಗಿದೆ.
ಮಹಾನಗರ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾದಷ್ಟು ಅಪರಾಧ ಚಟುವಟಿಕೆಗಳು ಅಧಿಕವಾಗಿವೆ. ಕೆಲ ಪುಂಡರು ಕೊಲೆ, ದರೋಡೆ, ಸುಲಿಗೆ ಸೇರಿದಂತೆ ವಿವಿಧ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದಾರೆ. ರೌಡಿಗಳನ್ನು ನಿಯಂತ್ರಿಸಲು ನಗರ ಪೊಲೀಸ್ ಆಯುಕ್ತರು ಈ ನಿರ್ಧಾರ ಕೈಗೊಂಡಿದ್ದಾರೆ.