ಬೆಂಗಳೂರು: ಭಾನುವಾರ ಸಂಜೆಯಿಂದಲೇ ನಗರದ ಖಗೋಳ ಆಸಕ್ತರು ಜವಾಹರ್ ಲಾಲ್ ನೆಹರು ತಾರಾಲಯದ ಕಡೆ ದೌಡಾಯಿಸಿಸುತ್ತಿದ್ದಾರೆ. ತಾರಾಲಯದ ದೂರದರ್ಶಕದ ಮೂಲಕ ಖಗೋಳದ ವಿಶೇಷ ವಿಸ್ಮಯವನ್ನು ಕಣ್ತುಂಬಿಸಿಕೊಂಡಿರುವ ವಿಜ್ಞಾನ ಆಸಕ್ತರು ಇಂದು ಕೂಡ ಈ ವಿಸ್ಮಯದ ದೃಶ್ಯ ವೀಕ್ಷಣೆಗೆ ಸಾಕ್ಷಿಯಾಗಲಿದ್ದಾರೆ.
ಖಗೋಳದಲ್ಲಿ ಗುರು ಹಾಗೂ ಶನಿ ಗ್ರಹಗಳು ಒಂದರ ಪಕ್ಕ ಒಂದು ಇದ್ದಂತೆ ಕಂಡು ಬರುತ್ತಿದ್ದು, ಈ ಅಪರೂಪದ ದೃಶ್ಯ ಕಣ್ತುಂಬಿಸಿಕೊಳ್ಳಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ.
ಈ ಬಗ್ಗೆ ನಿನ್ನೆ ತಡ ರಾತ್ರಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಜವಾಹರ್ ಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ಅವರು, ಖಗೋಳದಲ್ಲಿ ಎರಡು ಅಕಾಶಕಾಯಗಳು ಒಂದರ ಹತ್ತಿರ ಇನ್ನೊಂದು ಬಂದಿರುವಂತೆ ಗೋಚರಿಸುತ್ತಿವೆ. ಶನಿ ಹಾಗೂ ಗುರು ಗ್ರಹಗಳು ತುಂಬಾ ಹತ್ತಿರದಲ್ಲಿ ಬಂದಿದ್ದು, ಇದಕ್ಕೆ "ಗ್ರೇಟ್ ಕನ್ಜಕ್ಷನ್" ಎಂದು ಕರೆಯುತ್ತೇವೆ ಎಂದು ಮಾಹಿತಿ ನೀಡಿದರು.
ಸೂರ್ಯಾಸ್ತದ ನಂತರ ಪಶ್ಚಿಮ ದಿಕ್ಕಿನಲ್ಲಿ ಪ್ರಕಾಶಮಾನವಾಗಿ ಕಾಣುವ ಗುರು ಗ್ರಹ ಅದರ ಮೇಲೆ ಸಮೀಪದಲ್ಲೇ ಮಂಕಾದ ಶನಿ ಗ್ರಹ ಕಾಣಿಸುತ್ತದೆ. ಸೋಮವಾರ ಈ ಎರಡು ಗ್ರಹಗಳು ಒಟ್ಟಿಗೆ ಪಕ್ಕ ಪಕ್ಕದಲ್ಲೇ ಗೋಚರಿಸುತ್ತವೆ ಹಾಗೂ ಇವನ್ನು ಬರಿಗಣ್ಣಿನಿಂದ ನೋಡಬಹುದು ಎಂದು ಪ್ರಮೋದ್ ತಿಳಿಸಿದರು.
ಒಟ್ಟಿನಲ್ಲಿ ಒಂದು ವಿಶೇಷ ಖಗೋಳ ಘಟನಾವಳಿಗೆ ಸಾಕ್ಷಿಯಾಗಲು ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯ ಸರ್ವ ರೀತಿಯಲ್ಲಿ ಸಜ್ಜಾಗಿದ್ದು, ಇದರ ಲೈವ್ಅನ್ನು ನಮ್ಮ 'ಈಟಿವಿ ಭಾರತ'ದ ಪ್ರೇಕ್ಷಕರು ವೀಕ್ಷಿಸಬಹುದು.