ಬೆಂಗಳೂರು: ಎರಡು ದಿನ ಹಿಂದೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ನಾಯಕರ ಸಭೆ ರದ್ದಾಗಿದೆ ಎಂದು ಹೇಳಲಾಗಿತ್ತು. ಆದರೆ ಅದು ನಡೆಯದೇ ಮುಗಿದಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.
ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರ ಆಯ್ಕೆ, ಜೆಡಿಎಸ್ ಜತೆ ಮೈತ್ರಿ ಮುಂದುವರಿಸುವ ಚರ್ಚೆ ಹಾಗೂ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಲು ಸೋಮವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಬೇಕಿದ್ದ ಮಹತ್ವದ ಸಭೆ ದಿಢೀರ್ ರದ್ದಾಗಿದೆ ಎನ್ನಲಾಗಿತ್ತು. ಆದರೆ ತಡವಾಗಿ ತಿಳಿದು ಬಂದ ಮಾಹಿತಿ ಎಂದರೆ ಸಭೆ ನಡೆಯದೇ ಕೆಲವೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಅವರೇ ಬಿಜೆಪಿ ಸರ್ಕಾರಕ್ಕೆ ಸಮರ್ಥವಾಗಿ ಸೆಡ್ಡು ಹೊಡೆಯುವ ಕಾಂಗ್ರೆಸ್ನ ಸೂಕ್ತ ಸಂಸದೀಯ ಪಟು ಎನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿದೆ. ರಾಷ್ಟ್ರೀಯ ನಾಯಕ ಗುಲಾಂ ನಬಿ ಆಜಾದ್ ಅವರೇ ಈ ತೀರ್ಮಾನಕ್ಕೆ ಬಂದಿದ್ದು, ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯರೇ ಸೂಕ್ತ ಎಂದು ಹೇಳಿ ಹೋಗಿದ್ದಾರೆ ಎಂಬ ಮಾಹಿತಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ತೀವ್ರ ಸ್ಪರ್ಧೆ ಒಡ್ಡಿದ್ದ ನಾಯಕರಲ್ಲಿ ಕೊನೆಯವರೆಗೆ ಉಳಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಗುಲಾಮ್ ನಬಿ ಆಜಾದ್ ಅವರು ಕರೆಸಿ ಸದ್ಯ ಕಳಂಕರಹಿತ ಹಾಗೂ ಉತ್ತಮ ಅನುಭವಿ ಸಂಸದೀಯ ಪಟು ಸಿದ್ದರಾಮಯ್ಯ ಆಗಿದ್ದಾರೆ. ಅವರಷ್ಟು ಅನುಭವ ನಿಮಗಿಲ್ಲ. ಇದರಿಂದ ಈ ಬಾರಿ ಅವರೇ ಪ್ರತಿಪಕ್ಷದ ನಾಯಕ ಆಗಲಿ ಬಿಡಿ. ನಿಮಗೆ ಬೇರೆ ಅವಕಾಶ ನೀಡುತ್ತೇವೆ. ಪ್ರತಿಪಕ್ಷದ ನಾಯಕರೇ ಕಳಂಕಿತರು ಅನ್ನುವ ಆರೋಪ ಹೊತ್ತಿದ್ದರೆ, ನಾವು ಸಮರ್ಥವಾಗಿ ಆಡಳಿತ ಪಕ್ಷ ಎದುರಿಸಲು ಸಾಧ್ಯವಾಗುವುದಿಲ್ಲ. ನೀವು ಸದ್ಯ ಸುಮ್ಮನಿರಿ, ಎಲ್ಲಾ ಪ್ರಕರಣಗಳಲ್ಲೂ ನಿರಾಳತೆ ಪಡೆದುಕೊಂಡು ಬನ್ನಿ ಆಮೇಲೆ ನೋಡೋಣ ಎಂದು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ.
ಮೈತ್ರಿ ಅತಂತ್ರ: ಮೈತ್ರಿ ಮುರಿದುಕೊಳ್ಳುವ ಇಲ್ಲವೇ ಮುಂದುವರಿಸುವ ವಿಚಾರದಲ್ಲಿ ನಾವು ಯಾವುದೇ ತೀಮಾನ ಕೈಗೊಳ್ಳುವುದು ಬೇಡ. ನಾವೇ ಜೆಡಿಎಸ್ನವರಿಗೆ ಕೇಳಿ ಮೈತ್ರಿ ಮಾಡಿಕೊಂಡಿದ್ದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಇದೆಲ್ಲದರ ಅರಿವಿದೆ. ಅವರೇ ಮೈತ್ರಿ ಮುರಿದುಕೊಳ್ಳುವ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಿರುವಾಗ, ನಾವು ಪ್ರಸ್ತಾಪಿಸಿ ನಿಷ್ಟೂರ ಆಗುವುದು ಬೇಡ ಎಂದು ಹೇಳಿದ್ದಾರೆ.
ಕೆಲ ದಿನ ಕಾಯೋಣ, ಉಪಚುನಾವಣೆ ಘೋಷಣೆಯಾಗಲು ಇನ್ನೂ ಕಾಲವಕಾಶ ಹಿಡಿಯಲಿದೆ. ಅಷ್ಟರಲ್ಲಿ ಒಂದಷ್ಟು ಬದಲಾವಣೆಗಳು ಆಗಬಹುದು. ಅಲ್ಲದೇ ತೀರಾ ಅನಿವಾರ್ಯವಾಗಿ ಮೈತ್ರಿ ಮುಂದುವರಿಸುವ ಇಂಗಿತ ವ್ಯಕ್ತವಾದರೂ ಅದಕ್ಕೆ ಎರಡೂ ಪಕ್ಷದಲ್ಲಿ ಬೆಂಬಲ ಇಲ್ಲ ಎಂದು ನಯವಾಗಿ ಹೇಳಿ ತಪ್ಪಿಸಿಕೊಳ್ಳುವ ಯತ್ನ ಮಾಡಿದರೆ ಆಯಿತು. ಸದ್ಯ ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ಕಾಂಗ್ರೆಸ್ಗೆ ಬಿಡಲು ಒಪ್ಪುತ್ತಿಲ್ಲ. ಇಂತದ್ದೇ ನಾಲ್ಕಾರು ವಿಚಾರ ಇಟ್ಟು ಮಾತುಕತೆ ನಡೆಸಿ, ವಿಶ್ವಾಸದಿಂದಲೇ ಮೈತ್ರಿಯಿಂದ ಹೊರ ಬರೋಣ. ಅರ್ನಹರಿಗೆ ತಪ್ಪು ಸಂದೇಶ ಹೋದರೆ ಅಪಾಯ. ಬಿಜೆಪಿ ಇಂಥದ್ದೊಂದು ಅವಕಾಶಕ್ಕೆ ಕಾಯುತ್ತಿದೆ. ಅದಕ್ಕೆ ಆಹಾರವಾಗುವುದು ಬೇಡ. ಇದರಿಂದ ಕೊಂಚ ಯೋಚಿಸಿ, ಕಾಯ್ದು ನಿರ್ಧರಿಸೋಣ ಎಂದು ಹೇಳಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಇದರಿಂದ ಕೆಲ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಕರೆದಿದ್ದ ಸಭೆ ಚರ್ಚೆಯಾಗದೇ, ಸೂಚನೆ ನೀಡುವ ಮೂಲಕ ಸಭೆ ಮುಕ್ತಾಯವಾಗಿದೆ ಎಂಬ ಮಾಹಿತಿ ಇದೆ.