ಬೆಂಗಳೂರು: ಟೆಂಡರ್ ಕಮಿಷನ್ ಆರೋಪ ಸಂಬಂಧ ಸಿಎಂ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಯವರು ಕಾರ್ಯನಿರ್ವಹಿಸಿಕೊಂಡ ದಿನದಿಂದ,10 ಕೋಟಿ ಅನುದಾನ ಮೀರಿದ ಎಲ್ಲಾ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಟೆಂಡರ್ ಪ್ರಕ್ರಿಯೆ ಅಥವಾ ಬಿಲ್ಲು ಪಾವತಿಗಳ ಬಗ್ಗೆ ಅಕ್ರಮಗಳು ನಡೆದಿವೆ ಎಂದು ಕಂಡು ಬಂದಿರುವ ಪ್ರಕರಣಗಳ ಹಾಗೂ ದೂರುಗಳು ಬಂದಿರುವ ಪ್ರಕರಣಗಳ ಬಗ್ಗೆ ಕೂಡಲೇ ತನಿಖೆಯನ್ನು ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ತನಿಖೆಗೆ ಸೂಚಿಸಿ ಸಿಎಸ್ಗೆ ಸಿಎಂ ಪತ್ರ:
ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಬಿಬಿಎಂಪಿಯಲ್ಲಿ ನಾನು ಅಧಿಕಾರ ಸ್ವೀಕರಿಸಿದ ದಿನದಿಂದ ಬೃಹತ್ ಕಾಮಗಾರಿಗಳಿಗೆ ಕರೆದ ಟೆಂಡರ್ ಪ್ರಕ್ರಿಯೆಗಳನ್ನು ಪರಿಶೀಲಿಸಬೇಕು. ಅವ್ಯವಹಾರ ನಡೆದಿರುವುದು ಕಂಡು ಬಂದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಮುಖ್ಯ ಕಾರ್ಯದರ್ಶಿ ರವಿ ಕುಮಾರ್ಗೆ ಪತ್ರ ಬರೆದಿದ್ದಾರೆ. ಈ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಕೂಡಲೇ ಈ ಸಂಬಂಧ ಸೂಚನೆ ನೀಡುವಂತೆ ತಿಳಿಸಿದ್ದಾರೆ.
ಭ್ರಷ್ಟಾಚಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಎಲ್ಲಾ ಗುತ್ತಿಗೆಗಳು, ಕಾರ್ಯಾದೇಶಗಳಿಗೆ ಅನುಮೋದನೆ ನೀಡಬೇಕು. ಇದಕ್ಕಾಗಿ ನಿಗದಿತ ಟೈಂ ಟೇಬಲ್ನ್ನು ಸಿದ್ಧಪಡಿಸಬೇಕು. ಅದನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಬಿಲ್ಗಳಿಗೆ ಕಂಪ್ಯೂಟರ್ ಜನರೇಟೆಡ್ ನಂಬರನ್ನು ನೀಡಬಹುದಾಗಿದೆ ಮತ್ತು ಕೇಂದ್ರೀಕೃತ ಲೆಕ್ಕಪತ್ರ ವ್ಯವಸ್ಥೆಯನ್ನು ಸ್ಥಾಪಿಸಬಹುದಾಗಿದೆ ಎಂದು ಸೂಚಿಸಿದ್ದಾರೆ.
ಗುತ್ತಿಗೆದಾರರು ಆಡಿಟರ್ ಹಾಗೂ ಅಕೌಂಟೆಂಟ್ ಸಂಪರ್ಕಕ್ಕೆ ಬಾರದೇ ಇರುವ ಪ್ರಕರಣಗಳಲ್ಲಿ ಆಡಿಟ್ ಹಾಗೂ ಬಿಲ್ ಪಾವತಿಯನ್ನು ಗುರುತಿಸಬಹುದಾಗಿದೆ. ಕಾರ್ಯಕಾರಿಣಿ ಇಂಜಿನಿಯರ್ರಿಂದ ನೇರವಾಗಿ ಲೆಕ್ಕಪತ್ರ ವಿಭಾಗಕ್ಕೆ ಬಿಲ್ ಅನ್ನು ಎಲೆಕ್ಟ್ರಾನಿಕ್ ಫಾರ್ಮೆಟ್‌ನಲ್ಲಿ ಸಲ್ಲಿಸಬೇಕು. ಇದರಿಂದ ಬಿಲ್ ಸಂಖ್ಯೆ ಸ್ವಯಂಚಾಲಿತವಾಗಿ ಸೃಷ್ಟಿಯಾಗಲಿದೆ ಎಂದು ಸೂಚಿಸಿದ್ದಾರೆ.