ಬೆಂಗಳೂರು: ಡಿಸೆಂಬರ್ 25ರಿಂದ ಬೆಂಗಳೂರಿನ 9 ವಿವಿಧ ಸ್ಥಳಗಳಲ್ಲಿ ಪ್ರಾರಂಭವಾಗಲಿರುವ 'ತೇಜಸ್ವಿ ಸೂರ್ಯ ಫುಟ್ಬಾಲ್ ಕಪ್' ಪಂದ್ಯವಳಿಗೆ 240ಕ್ಕೂ ಹೆಚ್ಚಿನ ತಂಡಗಳು ನೋಂದಣಿಯಾಗಿದ್ದು, 3.5 ಲಕ್ಷ ಬಹುಮಾನ ಮೊತ್ತದ ಅತಿ ದೊಡ್ಡ ಮುಕ್ತ ಫುಟ್ಬಾಲ್ ಟೂರ್ನಿ ನಡೆಯಲಿದೆ.
230 ತಂಡಗಳು 8 ಸ್ಥಳಗಳಲ್ಲಿ 5-ಎ-ಸೈಡ್ ನಾಕ್ ಔಟ್ ಟೂರ್ನಿ ಆಡಲಿದ್ದು, ಮಂಡ್ಯ, ಮೈಸೂರು, ಕೊಯಮತ್ತೂರು, ಊಟಿ ಸೇರಿದಂತೆ ಇತರ 8 ವೃತ್ತಿಪರ ತಂಡಗಳು 7-ಎ-ಸೈಡ್ ಪಂದ್ಯವನ್ನು ಕಿಕ್ ಸ್ಟಾರ್ಟ್ ಎಫ್ಸಿ-ಜೆಪಿನಗರ ಕ್ರೀಡಾಂಗಣದಲ್ಲಿ ಡಿಸೆಂಬರ್ 25, 26 ಮತ್ತು 27 ರಂದು ಆಡಲಿವೆ.
ಪಂದ್ಯಾವಳಿ ಕುರಿತು ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, "ಇಂಡಿಯನ್ ಸೂಪರ್ ಲೀಗ್ನಲ್ಲಿ ಬೆಂಗಳೂರು ಫುಟ್ಬಾಲ್ ತಂಡಕ್ಕೆ ಸಿಗುತ್ತಿರುವ ಅಭೂತಪೂರ್ವ ಸ್ಪಂದನೆಯಿಂದಲೇ ಬೆಂಗಳೂರು ಫುಟ್ಬಾಲ್ ಪ್ರೇಮಿಗಳ ನಗರವೆಂದು ಗೊತ್ತಾಗುತ್ತದೆ. ಬೆಂಗಳೂರು ದಕ್ಷಿಣ ಸಂಸದರ ಕಚೇರಿಯು ಯುವ ಫುಟ್ಬಾಲ್ ಆಟಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಟೂರ್ನಿ ಆಯೋಜಿಸುತ್ತಿದ್ದು, ಮುಂದಿನ 3 ದಿನಗಳ ಕಾಲ ರೋಚಕ ಫುಟ್ಬಾಲ್ ಪಂದ್ಯಗಳ ಹಣಾಹಣಿಗೆ ನಗರ ಸಾಕ್ಷಿಯಾಗಲಿದೆ." ಎಂದರು.
ಸಂಸದರ ಕಚೇರಿಯು 9 ವಿವಿಧ ಫುಟ್ಬಾಲ್ ಟರ್ಫ್‌ಗಳಲ್ಲಿ ಪಂದ್ಯ ಆಯೋಜನೆಗೊಳಿಸಿದ್ದು, ಕಿಕ್ ಸ್ಟಾರ್ಟ್ ಎಫ್ಸಿ(ಜೆಪಿ ನಗರ), ಫಿಟ್ ಆನ್ ಸ್ಪೋರ್ಟ್ಸ್(ಗೊಟ್ಟಿಗೆರೆ), ಸ್ಪೋರ್ಟ್ಸ್ ರಶ್(ಜಯನಗರ), ರಶ್ ಅರೇನಾ(ರಾಜಾಜಿನಗರ), ಟೈಗರ್ 5 ಬನಶಂಕರಿ, ಡ್ರಿಬಲ್ ಅರೇನಾ(ಉತ್ತರಹಳ್ಳಿ), ಗೋಲ್ಡನ್ ಲೆಗ್(ಹೆಚ್ಎಸ್ಆರ್ ಲೇಔಟ್), ಟರ್ಫ್ ಪಾರ್ಕ್ (ಕೋರಮಂಗಲ) & ಟರ್ಫ್ ಪಾರ್ಕ್, ಹೆಚ್ಎಸ್ಆರ್ ಲೇಔಟ್ಗಳಲ್ಲಿ ಪಂದ್ಯಗಳು ನಡೆಯಲಿವೆ. ಮಹಿಳಾ ಪಂದ್ಯಗಳು ಫಿಟ್ ಆನ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪುರುಷ ಓಪನ್ ವಿಭಾಗದ ಪಂದ್ಯಗಳು ಡಿಸೆಂಬರ್ 26ರಂದು ನಡೆಯಲಿವೆ ಎಂದು ತಿಳಿಸಿದ್ದಾರೆ.
ಟೂರ್ನಮೆಂಟ್ ನಿರ್ದೇಶಕ ಅರವಿಂದ್ ಸುಚಿಂದ್ರನ್ ಮಾತನಾಡಿ, "ಈ ಟೂರ್ನಮೆಂಟ್ಗೆ ದಾಖಲೆಯ 550ಕ್ಕೂ ಹೆಚ್ಚಿನ ತಂಡಗಳು ನೋಂದಣಿಗೊಂಡಿದ್ದು, 250ಕ್ಕೂ ಅಧಿಕ ಸ್ವಯಂ ಸೇವಕರು ಪಂದ್ಯದ ಯಶಸ್ವಿ ನಿರ್ವಹಣೆಗೆ ಸಹಕರಿಸಲು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಪ್ರತೀ ತಂಡಕ್ಕೂ ನಮೂದಿಸಿರುವ ಹತ್ತಿರದ ಕ್ರೀಡಾಂಗಣದಲ್ಲಿ ಪಂದ್ಯಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಸ್ಥಳದಲ್ಲಿನ 2 ಟಾಪ್ ತಂಡಗಳನ್ನು ಆಯ್ಕೆ ಮಾಡಿ ಮುಂದಿನ ಪಂದ್ಯಕ್ಕೆ ಆಯ್ಕೆಗೊಳಿಸಲಾಗುತ್ತದೆ ಎಂದು ತಿಳಿಸಿದರು.