ಬೆಂಗಳೂರು : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಾಳೆಯಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲು ಮುಂದಾಗಿದೆ. ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಹಲವು ಸಭೆಗಳನ್ನ ಮಾಡಲಾಗಿದೆ.
ಪದವೀಧರ ಶಿಕ್ಷಕರ ಸಮಸ್ಯೆ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಸೇರಿ ಮುಖ್ಯ ಶಿಕ್ಷಕರುಗಳಿಗೆ 15, 20, 25 ವರ್ಷಗಳ ವೇತನ ಬಡ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಹಾಗೇ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಕರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ 3 ತಿಂಗಳ ಹಿಂದೆಯೇ ಈ ಕುರಿತು ಕಾಲಮಿತಿಯಲ್ಲಿ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ತೀರ್ಮಾನ ಕೈಗೊಳ್ಳಲು ಮನವಿ ಮಾಡಲಾಗಿತ್ತು. ಇದೀಗ ಈಡೇರದ ಕಾರಣಕ್ಕೆ ಸರ್ಕಾರದ ಗಮನ ಸೆಳೆಯಲು ನಾಳೆ ಮಕ್ಕಳಿಗೆ ಪಾಠ ಮಾಡುವ ವೇಳೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲು ಸಜ್ಜಾಗಿದ್ದಾರೆ.
ಈಗಾಗಲೇ ಮೊದಲ ಭಾಗವಾಗಿ, ಅಕ್ಟೋಬರ್ 4ರಿಂದಲೇ ತರಬೇತಿ ಬಹಿಷ್ಕಾರವನ್ನು ಮುಂದುವರೆಸಿದ್ದಾರೆ. ಇದೀಗ ಮುಂದುವರೆದ ಭಾಗವಾಗಿ ನಾಳೆಯಿಂದ ಅಕ್ಟೋಬರ್ 29ರವರೆಗೆ ಕಪ್ಪು ಪಟ್ಟಿ ಧರಿಸಿ, ಶಾಲಾ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುತ್ತಾ ಸರ್ಕಾರದ ಗಮನ ಸೆಳೆಯಲಿದ್ದಾರೆ.
ತರಬೇತಿ ಬಹಿಷ್ಕಾರ, ಕಪ್ಪು ಬಟ್ಟೆ ಧರಿಸಿ ಶೈಕ್ಷಣಿಕ ಚಟುವಟಿಕೆ ನಿರ್ವಹಿಸಿದಾಗಲೂ ಸರ್ಕಾರ ಹಾಗೂ ಇಲಾಖೆ ಸ್ಪಂದಿಸದಿದ್ದರೆ ಮುಂದೆ ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ ಮಧ್ಯಾಹ್ನದ ಬಿಸಿಯೂಟದ (MDM) ಮಾಹಿತಿಯನ್ನು Update ಮಾಡದೇ, ಹಾಗೇ SATS ಮಾಹಿತಿಯನ್ನು Upload ಮಾಡದೇ ತಮ್ಮ ಅಸಹಕಾರ ವ್ಯಕ್ತಪಡಿಸಲಿದ್ದಾರೆ.
ಸರ್ಕಾರ ಸಮಸ್ಯೆ ಬಗೆಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ತರಗತಿ ಬಹಿಷ್ಕಾರ, ಶಾಲಾ ಬಹಿಷ್ಕಾರವೂ ಮಾಡುವ ಎಚ್ಚರಿಕೆಯನ್ನ ಸಂಘದ ಸದಸ್ಯರು ನೀಡಿದ್ದಾರೆ.
ಓದಿ: 9 ಮಂದಿ IPS ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ